ರಾಜ್ಯ ಬಿಜೆಪಿಯಲ್ಲಿನ ಬಣ ಬಡಿದಾಟ ತಾರಕಕ್ಕೇರಿದ್ದು, ರಾಜ್ಯಾಧ್ಯಕ್ಷ ವಿಜಯೇಂದ್ರ ಬಣದಿಂದ ಮತ್ತೊಂದು ವಿಕೆಟ್ ಪತನಗೊಳ್ಳುವ ಸೂಚನೆಯನ್ನು ಶಾಸಕ ಸುನೀಲ್ ಕುಮಾರ್ ನೀಡಿದ್ದಾರೆ.
ಶಾಸಕ ಸುನೀಲ್ ಕುಮಾರ್ ಹೈಕಮಾಂಡ್ ಗೆ ಪತ್ರ ಬರೆದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ತೆರವುಗೊಳಿಸುವಂತೆ ಮನವಿ ಮಾಡಿದ್ದಾರೆ. ಈ ಮೂಲಕ ಪರೋಕ್ಷವಾಗಿ ವಿಜಯೇಂದ್ರ ಬಣದಿಂದ ಹೊರಬರಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಲಾಗಿದೆ.
ವಿಜಯೇಂದ್ರ ಹಾಗೂ ಶಾಶಕ ಬಸನಗೌಡ ಪಾಟೀಲ್ ಬಣಗಳ ನಡುವೆ ವಾಕ್ಸಮರ ತಾರಕಕ್ಕೇರಿದ್ದು, ಏಕವಚನದಲ್ಲಿ ನಿಂದಿಸುವ ಮಟ್ಟಕ್ಕೆ ಇಳಿದಿದೆ. ವಿಜಯೇಂದ್ರ ಬಾಯಿ ಮುಚ್ಚಿಕೊಳ್ಳಿ ಎಂದು ಖಡಕ್ ಸೂಚನೆ ನೀಡಿದ ಬೆನ್ನಲ್ಲೇ ನಿಮ್ಮಪ್ಪನನ್ನು ಸಿಎಂ ಮಾಡಿದ್ದೇ ನಾವು ಎಂದು ರಮೇಶ್ ಜಾರಕಿಹೊಳಿ ತಿರುಗೇಟು ನೀಡಿದ್ದಾರೆ.
ಈ ಎಲ್ಲಾ ಬೆಳವಣಿಗೆ ನಡುವೆ ಕಾರ್ಕಳ ಶಾಸಕ ಸುನಿಲ್ ಕುಮಾರ್ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹುದ್ದೆ ತೊರೆಯಲು ಮುಂದಾಗಿದ್ದು, ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಮುಕ್ತಗೊಳಿಸುವಂತೆ ಹೈಕಮಾಂಡ್ಗೆ ಮೌಖಿಕವಾಗಿ ಮನವಿ ಮಾಡಿದ್ದಾರೆ. ಆದರೆ ಹೈಕಮಾಂಡ್ ಈ ಬಗ್ಗೆ ಯಾವುದೇ ಸೂಚನೆ ನೀಡದೇ ಇರುವುದು ಅಚ್ಚರಿ ಮೂಡಿಸಿದೆ.
ನಳಿನ್ ಕುಮಾರ್ ಕಟೀಲ್ ನಂತರ ರಾಜ್ಯಾಧ್ಯಕ್ಷ ಹುದ್ದೆ ಅಲಂಕರಿಸಿದ್ದ ವಿಜಯೇಂದ್ರ ವಿರುದ್ಧ ಬಸನಗೌಡ ಪಾಟೀಲ್ ಯತ್ನಾಳ್ ಬಣ ಅಸಮಾಧಾನ ಹೊರಹಾಕಿದೆ. ಪ್ರತ್ಯೇಕ ಸಭೆ, ಹೋರಾಟ ಆಯೋಜಿಸುವ ಮೂಲಕ ಪಕ್ಷದ ಮೇಲೆ ಹಿಡಿತ ಸಾಧಿಸಲು ಪ್ರಯತ್ನಿಸುತ್ತಿದೆ.
ಪ್ರಧಾನ ಕಾರ್ಯದರ್ಶಿ ಸ್ಥಾನ ತ್ಯಜಿಸುವ ಮೂಲಕ ಸುನೀಲ್ ಕುಮಾರ್, ವಿಜಯೇಂದ್ರ ಬಣದಿಂದ ಹೊರಬರಲು ಪ್ರಯತ್ನಿಸುತ್ತಿದ್ದಾರೆ. ಇತ್ತೀಚೆಗೆ ವಿಜಯೇಂದ್ರ ಅವರಿಂದ ಅಂತರ ಕಾಯ್ದುಕೊಂಡಿರುವ ಸುನೀಲ್ ಕುಮಾರ್ ಬಸನಗೌಡ ಪಾಟೀಲ್ ಬಣದಲ್ಲಿ ಗುರುತಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.