ನನ್ನ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿ ರಾಜಕೀಯವಾಗಿ ಮುಗಿಸಲು ಯತ್ನಗಳು ನಡೆದಿವೆ. ಇದರಿಂದ ನೊಂದು ಪಕ್ಷ ತೊರೆಯುವುದಾಗಿ ಹೇಳಿದ್ದೇನೆ ಎಂದು ಬಿಜೆಪಿ ಮುಖಂಡ ಹಾಗೂ ಮಾಜಿ ಸಚಿವ ಶ್ರೀರಾಮುಲು ಗಂಭೀರ ಆರೋಪ ಮಾಡಿದ್ದಾರೆ.
ಮಂಗಳವಾರ ಬೆಂಗಳೂರಿನಲ್ಲಿ ನಡೆದ ಬಿಜೆಪಿ ಕೋರ್ ಸಮಿತಿ ಸಭೆಯಲ್ಲಿ ವಾಕ್ಸಮರ ನಡೆದಿದ್ದು, ಈ ವೇಳೆ ತೀವ್ರ ಅಸಮಾಧಾನಕ್ಕೆ ಒಳಗಾದ ಶ್ರೀರಾಮುಲು ಪಕ್ಷ ತೊರೆಯುವುದಾಗಿ ಹೇಳಿರುವುದು ಈಗ ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿಸಿದೆ.
ತಮಗೆ ಅಪಮಾನ ಮಾಡಲಾಗಿದೆ ಎಂದು ಅಸಮಾಧಾನಗೊಂಡ ಶ್ರೀರಾಮುಲು ಸಭೆಯ ಮಧ್ಯದಿಂದಲೇ ಹೊರನಡೆದಿದ್ದು, ಮಾಧ್ಯಮ ಮುಂದೆ ಹೋಗುವುದಾಗಿ ಹೇಳಿದರು. ಈ ವೇಳೆ ಸಿಟಿ ರವಿ ಮತ್ತುವಿಜಯೇಂದ್ರ ಅವರ ಮನವೊಲಿಕೆ ಮಾಡುವಲ್ಲಿ ಯಶಸ್ವಿಯಾಗಿದ್ದರು.
ಆದರೆ ಬುಧವಾರ ಆರ್ ಎಸ್ ಎಸ್ ಮತ್ತು ಬಿಜೆಪಿ ಹೈಕಮಾಂಡ್ ಗೆ ಪತ್ರ ಬರೆದು ತಮ್ಮ ಅಸಮಾಧಾನ ತೋಡಿಕೊಂಡ ಶ್ರೀರಾಮುಲು ಪಕ್ಷ ತೊರೆಯುವ ಇಂಗಿತ ವ್ಯಕ್ತಪಡಿಸಿದ್ದರು.
ತಮ್ಮ ಆತ್ಮೀಯ ಗೆಳೆಯ ಜನಾರ್ದನ ರೆಡ್ಡಿ ವಿರುದ್ಧ ಗಂಭೀರ ಆರೋಪ ಮಾಡಿರುವ ಶ್ರೀರಾಮುಲು, ನಾನು ಪಕ್ಷಕ್ಕಾಗಿ ಏನೂ ಮಾಡಿಲ್ಲ ಎಂದು ಸುಳ್ಳು ಆರೋಪ ಮಾಡಲಾಗುತ್ತಿದೆ. ನಾನು ನನ್ನ ಕ್ಷೇತ್ರ ಮಾತ್ರವಲ್ಲೇ ಇತರೆ ಕ್ಷೇತ್ರಗಳಲ್ಲೂ ಪ್ರಾಮಾಣಿಕವಾಗಿ ದುಡಿದಿದ್ದೇನೆ. ಇಂತಹ ಆರೋಪ ಸಹಿಸಲು ಸಾಧ್ಯವಿಲ್ಲ. ನನ್ನ ಭಾವನೆಗೆ ತೀವ್ರ ಧಕ್ಕೆ ಯಾಗಿದೆ ಎಂದು ಅವರು ಹೇಳಿದರು.
ಈ ವೇಳೆ ಮಧ್ಯಪ್ರವೇಶಿಸಿರುವ ಆರ್ ಎಸ್ ಎಸ್ ಮುಖಂಡ ಬಿಎಲ್ ಸಂತೋಷ್, ನಿಮ್ಮ ಕೆಲಸ ಎಲ್ಲರಿಗೂ ಗೊತ್ತಿದೆ. ಪಕ್ಷ ಅಂದ ಮೇಲೆ ಒಂದು ಮಾತು ಬರುತ್ತೆ, ಹೋಗುತ್ತೆ. ನೀವು ಚಿಂತೆ ಮಾಡಬೇಡಿ. ಸಮಯ ಬಂದಾಗ ಹೈಕಮಾಂಡ್ ಸೂಕ್ತ ಕ್ರಮ ಕೈಗೊಳ್ಳುತ್ತದೆ ಎಂದು ಭರವಸೆ ನೀಡಿದ್ದಾರೆ ಎಂದು ಹೇಳಲಾಗಿದೆ.