ಲೈಂಗಿಕ ದೌರ್ಜನ್ಯ ನಡೆಸಿದ ಪೆನ್ ಡ್ರೈವ್ ಪ್ರಕರಣದಲ್ಲಿ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಬೆಂಗಳೂರಿನ ಸೆಷನ್ಸ್ ನ್ಯಾಯಾಲಯ ಜೂನ್ 6ರವರೆಗೆ ಪೊಲೀಸ್ ಕಸ್ಟಡಿಗೆ ನೀಡಿದೆ.
ಶುಕ್ರವಾರ ತಡರಾತ್ರಿ ಜರ್ಮನಿಯಿಂದ ಆಗಮಿಸಿದ ಪ್ರಜ್ವಲ್ ರೇವಣ್ಣ ಅವರನ್ನು ಎಸ್ ಐಟಿ ಪೊಲೀಸರು ವಶಕ್ಕೆ ಪಡೆದು ಮಧ್ಯಾಹ್ನ ನ್ಯಾಯಾಲಯದ ಮುಂದೆ ಹಾಜರುಪಡಿಸಿದರು.
ಈಗಾಗಲೇ ಜಾಮೀನಿಗೆ ಅರ್ಜಿ ಸಲ್ಲಿಸಿದ್ದ ಪ್ರಜ್ವಲ್ ರೇವಣ್ಣ ಅವರನ್ನು ಪೊಲೀಸ್ ಕಸ್ಟಡಿಗೆ ನೀಡುವಂತೆ ಪೊಲೀಸರು ಮನವಿ ಮಾಡಿದರು. ಈ ವೇಳೆ ನಡೆದ ವಿಚಾರಣೆ ವೇಳೆ ಪ್ರಜ್ವಲ್ ರೇವಣ್ಣ ತಮ್ಮನ್ನು ಹೇಗೆ ನಡೆಸಿಕೊಂಡರು ಎಂದು ನ್ಯಾಯಾಧೀಶರ ಮುಂದೆ ದೂರು ನೀಡಿದರು.
ಎಸ್ ಐಟಿ ಕಚೇರಿ ಗಬ್ಬುನಾರುತ್ತೆ. ಅಲ್ಲದೇ ರಾತ್ರಿಯೀಡಿ ನನಗೆ ಮಲಗಲು ಬಿಡದೇ ಪ್ರಶ್ನೆಗಳನ್ನು ಕೇಳಿ ವಿಚಾರಣೆ ನಡೆಸಿದ್ದಾರೆ. ಸಂಸದನಾದ ನನಗೆ ಸೂಕ್ತ ಸೌಲಭ್ಯ ಕಲ್ಪಿಸಿಲ್ಲ. ಅಲ್ಲದೇ ನನ್ನ ಮೇಲೆ ಆರೋಪ ಸುಳ್ಳಾಗಿದ್ದು, ನಿಜಾಂಶ ಇಲ್ಲ. ಆದ್ದರಿಂದ ಜಾಮೀನು ನೀಡಬೇಕು ಎಂದು ಹೇಳಿದ್ದಾರೆ.
ಈ ವೇಳೆ ವಿಚಾರಣೆ ವೇಳೆ ನನಗೆ ಏನೂ ಗೊತ್ತಿಲ್ಲ ಎಂದು ಒಂದೇ ಉತ್ತರ ನೀಡುವ ಮೂಲಕ ಪ್ರಜ್ವಲ್ ವಿಚಾರಣೆಗೆ ಸಹಕರಿಸುತ್ತಿಲ್ಲ ಎಂದು ಪೊಲೀಸರು ವಾದ ಮಂಡಿಸಿದರು.