ಟಿ-20 ವಿಶ್ವಕಪ್ ವಿಜೇತ ಭಾರತ ತಂಡದ ಮುಖ್ಯ ಕೋಚ್ ಆಗಿದ್ದ ರಾಹುಲ್ ದ್ರಾವಿಡ್ ಬಿಸಿಸಿಐ ನೀಡಿದ್ದ ಬಹುಮಾನ ಮೊತ್ತದಲ್ಲಿ 2.5 ಕೋಟಿ ರೂ. ಬೋನಸ್ ಸ್ವೀಕರಿಸಲು ನಿರಾಕರಿಸಿದ್ದಾರೆ.
ಬಿಸಿಸಿಐ ಟಿ-20 ವಿಶ್ವಕಪ್ ಗೆದ್ದ ಭಾರತ ತಂಡಕ್ಕೆ 125 ಕೋಟಿ ರೂ. ಬಹುಮಾನ ಮೊತ್ತ ಘೋಷಿಸಿತ್ತು. ರಾಹುಲ್ ದ್ರಾವಿಡ್ ಗೆ 5 ಕೋಟಿ ರೂ. ಹಾಗೂ ಬ್ಯಾಟಿಂಗ್, ಫೀಲ್ಡಿಂಗ್ ಮತ್ತು ಬೌಲಿಂಗ್ ಕೋಚ್ ಗಳಿಗೆ ತಲಾ 2.5 ಕೋಟಿ ರೂ. ಬಹುಮಾನ ಮೊತ್ತದ ಹಂಚಿಕೆ ಮಾಡಲಾಗಿತ್ತು.
ರಾಹುಲ್ ದ್ರಾವಿಡ್ ಗೆ ಭಾರತ ತಂಡದ ಸಹ 15 ಆಟಗಾರರ ಜೊತೆ ತಲಾ 5 ಕೋಟಿ ರೂ. ಹಂಚಿಕೆ ಮಾಡಲಾಗಿತ್ತು. ಆದರೆ ಸಹ ಕೋಚ್ ಗಳಿಗಿಂತ ತಮಗೆ ಹೆಚ್ಚುವರಿಯಾಗಿ 2.5 ಕೋಟಿ ರೂ. ಪಡೆಯಲು ರಾಹುಲ್ ದ್ರಾವಿಡ್ ನಿರಾಕರಿಸಿದ್ದಾರೆ.
ಸಹಾಯಕ ಸಿಬ್ಬಂದಿಗಿಂತ ಹೆಚ್ಚು ಬೋನಸ್ ಮೊತ್ತ ಪಡೆಯಲು ನಿರಾಕರಿಸಿರುವ ರಾಹುಲ್ ದ್ರಾವಿಡ್ 2.5 ಕೋಟಿ ರೂ. ಹಿಂತಿರುಗಿಸಲು ನಿರ್ಧರಿಸಿದ್ಧಾರೆ. ತನ್ನನ್ನು ಸೇರಿಸಿ ಸಹಾಯಕ ಸಿಬ್ಬಂದಿಗೆ ಬಹುಮಾನ ಮೊತ್ತವನ್ನು ಸಮಾನವಾಗಿ ಹಂಚಿಕೆ ಆಗಬೇಕು. ಆದ್ದರಿಂದ ನನಗೆ ಹೆಚ್ಚುವರಿಯಾಗಿ ನೀಡಿದ ಮೊತ್ತವನ್ನು ಹಿಂತಿರುಗಿಸುವುದಾಗಿ ದ್ರಾವಿಡ್ ಹೇಳಿದ್ದಾರೆ.
ರಾಹುಲ್ ದ್ರಾವಿಡ್ ಭಾರತ ತಂಡಕ್ಕೆ ಸಲ್ಲಿಸಿದ ಸೇವೆಗಾಗಿ ತಮಗೆ ಸಿಕ್ಕ ಬಹುಮಾನ ಮೊತ್ತ ಹಿಂತಿರುಗಿಸುತ್ತಿರುವುದು ಇದೇ ಮೊದಲಲ್ಲ. 2013ರಲ್ಲಿ ದ್ರಾವಿಡ್ ಕೋಚ್ ಆಗಿದ್ದ 19 ವರ್ಷದೊಳಗಿನವರ ವಿಶ್ವಕಪ್ ಟೂರ್ನಿ ಗೆದ್ದಾಗ ಬಿಸಿಸಿಐ ಆಟಗಾರರಿಗೆ ತಲಾ 20 ಲಕ್ಷ ರೂ. ಮತ್ತು ಕೋಚ್ ಗೆ 50 ಲಕ್ಷ ರೂ. ಬಹುಮಾನ ನೀಡಲಾಗಿತ್ತು.
ಆದರೆ ದ್ರಾವಿಡ್ ಎಲ್ಲರಿಗೂ ಸಮಾನವಾಗಿ ಬಹುಮಾನ ಮೊತ್ತ ಹಂಚಿಕೆ ಆಗಬೇಕು ಎಂದು ಆಗ್ರಹಿಸಿ 50 ಲಕ್ಷ ರೂ. ಹಿಂತಿರುಗಿಸಲು ನಿರ್ಧರಿಸಿದ್ದರು. ಕೊನೆಗೆ ದ್ರಾವಿಡ್ ಒತ್ತಾಯಕ್ಕೆ ಮಣಿದ ಬಿಸಿಸಿಐ, ಎಲ್ಲಾ ಆಟಗಾರರಿಗೂ 30 ಲಕ್ಷ ರೂ. ಹೆಚ್ಚು ಬಹುಮಾನ ಮೊತ್ತ ನೀಡಿತ್ತು.