ಸುಧಾರಣಾವಾದಿ ಮಸೂದ್ ಪೆಜೆಶಿಕಿಯಾನ್ ಪ್ರತಿಸ್ಪರ್ಧಿ ತೀವ್ರ ಮೂಲಭೂತವಾದಿ ಸಯೀದ್ ಜಲೀಲ್ ಅವರನ್ನು ಸೋಲಿಸಿ ಇರಾನ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಶನಿವಾರ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಮಸೂದ್ ಪೆಜೆಶಿಕಿಯಾನ್ 16 ದಶಲಕ್ಷ ಮತಗಳನ್ನು ಪಡೆದರೆ, ಸಯೀದ್ ಜಲೀಲ್ 13 ದಶಲಕ್ಷ ಮತಗಳನ್ನು ಪಡೆದು ಸೋಲುಂಡರು.
ದೇಶಾದ್ಯಂತ ನಡೆದ ಚುನಾವಣೆಯಲ್ಲಿ ಶೇ.49.38ರಷ್ಟು ಮತದಾನವಾಗಿದ್ದು, 30 ದಶಲಕ್ಷ ಜನರು ಮತದಾನ ಮಾಡಿದ್ದಾರೆ. ಸುಮಾರು 6 ಲಕ್ಷ ಮತಗಳು ವ್ಯರ್ಥಗೊಂಡಿವೆ.
ಮೂಲಭೂತವಾದಿ ಇಬ್ರಾಹಿಂ ರೈಸಿ ಹೆಲಿಕಾಫ್ಟರ್ ದುರಂತದಲ್ಲಿ ಮೃತಪಟ್ಟ ಹಿನ್ನೆಲೆಯಲ್ಲಿ ಇರಾನ್ ಅಧ್ಯಕ್ಷೀಯ ಚುನಾವಣೆ ನಡೆಯಿತು. ಈ ಚುನಾವಣೆಯಲ್ಲಿ ಆಡಳಿತಾರೂಢ ಪಕ್ಷದ ಮುಖ್ಯಸ್ಥರಿಗೆ ಭಾರೀ ಹಿನ್ನಡೆ ಉಂಟಾಗಿದೆ.
ಗೆಲುವಿನ ನಂತರ ಮಾತನಾಡಿದ ಮಸೂದ್ ಪೆಜೆಶಿಕಿಯಾನ್, ನನ್ನ ಗೆಲುವಿಗೆ ಕಾರಣರಾದ ಪ್ರತಿಯೊಬ್ಬರಿಗೂ ಧನ್ಯವಾದಗಳು. ನಾವು ಎಲ್ಲರ ಸ್ನೇಹ ಬಯಸಲು ಕೈ ಚಾಚಲು ಸಿದ್ಧರಿದ್ದೇವೆ. ದೇಶದ ಪ್ರಗತಿಗಾಗಿ ಪ್ರತಿಯೊಬ್ಬ ನಾಗರಿಕನನ್ನೂ ಬಳಸಿಕೊಳ್ಳಲಾಗುವುದು ಎಂದು ಹೇಳಿದರು.