ಭಾರತ ಖ್ಯಾತ ಡಬಲ್ಸ್ ಆಟಗಾರ ಹಾಗೂ ಕರ್ನಾಟಕದ ರೋಹನ್ ಬೋಪಣ್ಣ ಪ್ಯಾರಿಸ್ ಒಲಿಂಪಿಕ್ಸ್ ನ ಆರಂಭಿಕ ಪಂದ್ಯದಲ್ಲೇ ಮುಗ್ಗರಿಸಿದ ಬೆನ್ನಲ್ಲೇ ದೇಶಕ್ಕೆ ಆಡಿದ ಕೊನೆಯ ಪಂದ್ಯ ಎಂದು ಹೇಳುವ ಮೂಲಕ ಟೆನಿಸ್ ಗೆ ನಿವೃತ್ತಿ ಘೋಷಿಸಿದ್ದಾರೆ.
ರೋಹಿತ್ ಬೋಪಣ್ಣ ಮತ್ತು ಶ್ರೀರಾಮ್ ಬಾಲಾಜಿ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಭಾರತ ತಂಡದ ಡಬಲ್ಸ್ ಆಟಗಾರರಾಗಿ ಕಣಕ್ಕಿಳಿದಿದ್ದರು. ವಿಶ್ವದ ಮೂರನೇ ಶ್ರೇಯಾಂಕಿತ ಬೋಪಣ್ಣ ಟೆನಿಸ್ ನಲ್ಲಿ ಭಾರತಕ್ಕೆ ಪದಕದ ಭರವಸೆ ಮೂಡಿಸಿದ್ದರು.
ಬೋಪಣ್ಣ- ಶ್ರೀರಾಮ್ ಜೋಡಿ ಸೋಮವಾರ ನಡೆದ ಮೊದಲ ಸುತ್ತಿನ ಪಂದ್ಯದಲ್ಲೇ ಫ್ರಾನ್ಸ್ ನ ಎಡುಗ್ರೋಡ್ ರೋಜತ್ ಮತ್ತು ವೆಸ್ಸೆಲಿನ್ ವಿರುದ್ಧ ಸೋಲುಂಡರು.
ಸೋಲಿನ ಬೆನ್ನಲ್ಲೇ ಭಾರತದ ಪರ ಇದು ನನ್ನ ಕೊನೆಯ ಪಂದ್ಯ ಎಂದು ಘೋಷಿಸಿದರು. ಈಗಾಗಲೇ ಡೇವಿಸ್ ಕಪ್ ಗೆ ವಿದಾಯ ಘೋಷಿಸಿರುವ ಬೋಪಣ್ಣ ಮುಂದಿನ ದಿನಗಳಲ್ಲಿ ಭಾರತ ಪರ ಕಣಕ್ಕಿಳಿಯುವುದಿಲ್ಲ. ಆದರೆ ವೈಯಕ್ತಿಕಾಗಿ ಗ್ರ್ಯಾನ್ ಸ್ಲಾಮ್ ಟೂರ್ನಿಗಳಲ್ಲಿ ಮುಂದುವರಿಯುವ ಸೂಚನೆ ನೀಡಿದ್ದಾರೆ.
1996ರಲ್ಲಿ ಅಟ್ಲಾಂಟಾ ಒಲಿಂಪಿಕ್ಸ್ ನಲ್ಲಿ ಲಿಯಾಂಡರ್ ಪೇಸ್ ಕಂಚಿನ ಪದಕ ಗೆದ್ದ ನಂತರ ಭಾರತಕ್ಕೆ ಒಲಿಂಪಿಕ್ಸ್ ನಲ್ಲಿ ಪದಕ ಗೆದ್ದಿಲ್ಲ. 2016ರಲ್ಲಿ ಬೋಪಣ್ಣ ಮತ್ತು ಸಾನಿಯಾ ಮಿರ್ಜಾ ಜೋಡಿ ಉತ್ತಮ ಪ್ರದರ್ಶನ ನೀಡಿ ಭರವಸೆ ನೀಡಿದ್ದರೂ 4ನೇ ಸುತ್ತಿನಲ್ಲಿ ಸೋತು ಕೂದಲೆಳೆ ಅಂತರದಿಂದ ಪ್ರಶಸ್ತಿ ವಂಚಿತರಾಗಿದ್ದರು.