ಮಾಜಿ ನಾಯಕರು ಹಾಗೂ ಹಿರಿಯ ಆಟಗಾರರೂ ಆದ ರೋಹಿತ್ ಶರ್ಮ ಮತ್ತು ವಿರಾಟ್ ಕೊಹ್ಲಿ ಅವರ ಅಜೇಯ ಆಟದಿಂದ ಭಾರತ ತಂಡ 9 ವಿಕೆಟ್ ಗಳ ಭಾರೀ ಅಂತರದಿಂದ ಆಸ್ಟ್ರೇಲಿಯಾ ತಂಡವನ್ನು ಸೋಲಿಸಿದೆ.
ಸಿಡ್ನಿಯಲ್ಲಿ ಶನಿವಾರ ನಡೆದ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡವನ್ನು 46.3 ಓವರ್ ಗಳಲ್ಲಿ ಆಲೌಟ್ ಮಾಡಿದ ಭಾರತ ತಂಡ ಸ್ಪರ್ಧಾತ್ಮಕ ಮೊತ್ತವನ್ನು 38.3 ಓವರ್ ಗಳಲ್ಲಿ ಕೇವಲ 1 ವಿಕೆಟ್ ಕಳೆದುಕೊಂಡು ಜಯಭೇರಿ ಬಾರಿಸಿತು. ಈ ಸೋಲಿನ ಹೊರತಾಗಿಯೂ ಆಸ್ಟ್ರೇಲಿಯಾ 2-1ರಿಂದ ಸರಣಿ ಗೆದ್ದುಕೊಂಡಿತು.
ಭಾರತ ತಂಡ ಆರಂಭದಲ್ಲೇ ನಾಯಕ ಶುಭಮನ್ ಗಿಲ್ (24) ಸಾಧಾರಣ ಮೊತ್ತಕ್ಕೆ ಕಳೆದುಕೊಂಡರೂ ರೋಹಿತ್ ಶರ್ಮ ಮತ್ತು ಗಿಲ್ ಮೊದಲ ವಿಕೆಟ್ ಗೆ 69 ರನ್ ಜೊತೆಯಾಟದಿಂದ ಉತ್ತಮ ಆರಂಭ ತಂದುಕೊಟ್ಟರು.
ಕಳೆದ ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ್ದ ರೋಹಿತ್ ಶರ್ಮ ಈ ಪಂದ್ಯದಲ್ಲಿ ಶತಕ ಸಿಡಿಸಿದರು. ಇದು ಅವರಿಗೆ 33ನೇ ಏಕದಿನ ಶತಕವಾಗಿದೆ. ರೋಹಿತ್ 105 ಎಸೆತಗಳಲ್ಲಿ ಶತಕ ಪೂರೈಸಿದರು. ರೋಹಿತ್ ಅಂತಿಮವಾಗಿ 125 ಎಸೆತಗಳಲ್ಲಿ 13 ಬೌಂಡರಿ ಮತ್ತು 3 ಸಿಕ್ಸರ್ ನೊಂದಿಗೆ 121 ರನ್ ಬಾರಿಸಿ ಅಜೇಯರಾಗಿ ಉಳಿದರು.
ಮತ್ತೊಂದೆಡೆ ಸತತ ಎರಡು ಶೂನ್ಯ ಸಂಪಾದನೆಯೊಂದಿಗೆ ಆಘಾತಗೊಂಡಿದ್ದ ಕಿಂಗ್ ಕೊಹ್ಲಿ ಈ ಪಂದ್ಯದಲ್ಲಿ ಅರ್ಧಶತಕ ಸಿಡಿಸಿ ಇನ್ನೂ ಫಾರ್ಮ್ ನಲ್ಲಿ ಇದ್ದೇನೆ ಎಂದು ಸಾಬೀತುಪಡಿಸಿದರು. ಕೊಹ್ಲಿ 56 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು. ಅಂತಿಮವಾಗಿ 81 ಎಸೆತಗಳಲ್ಲಿ 7 ಬೌಂಡರಿ ಸಹಿತ 74 ರನ್ ಬಾರಿಸಿ ಔಟಾಗದೇ ಉಳಿದರು. ಇದು ಅವರ 75ನೇ ಅರ್ಧಶತಕವಾಗಿರುವುದು ವಿಶೇಷ.
ಆಸ್ಟ್ರೇಲಿಯಾ 236 ರನ್ ಗೆ ಆಲೌಟ್
ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡ ಮಧ್ಯಮ ವೇಗಿ ಹರ್ಷಿತ್ ರಾಣಾ ಮಾರಕ ದಾಳಿಗೆ ತತ್ತರಿಸಿ 46.4 ಓವರ್ ಗಳಲ್ಲಿ 236 ರನ್ ಗೆ ಆಲೌಟಾಯಿತು.
ಹರ್ಷಿತ್ ರಾಣಾ 39 ರನ್ ನೀಡಿ 4 ವಿಕೆಟ್ ಪಡೆದು ಜೀವನ ಶ್ರೇಷ್ಠ ಸಾಧನೆ ಮಾಡಿದರು. ಸ್ಪಿನ್ ಆಲ್ ರೌಂಡರ್ ವಾಷಿಂಗ್ಟನ್ ಸುಂದರ್ 2 ವಿಕೆಟ್ ಪಡೆದರು.
ಈಗಾಗಲೇ 2-0ಯಿಂದ ಸರಣಿ ಗೆದ್ದಿರುವ ಆಸ್ಟ್ರೇಲಿಯಾ ತಂಡದ ಆರಂಭ ಉತ್ತಮವಾಗಿಯೇ ಇತ್ತು. ಆದರೆ ನಿಯಮಿತವಾಗಿ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿದ್ದರಿಂದ ಬೃಹತ್ ಮೊತ್ತ ದಾಖಲಿಸಲು ವಿಫಲವಾಯಿತು.
ನಾಯಕ ಮಿಚೆಲ್ ಮಾರ್ಷ್ (41) ಮತ್ತು ಟ್ರಾವಿಸ್ ಹೆಡ್ (29) ಮೊದಲ ವಿಕೆಟ್ ಗೆ 61 ರನ್ ಜೊತೆಯಾಟ ನಿಭಾಯಿಸಿ ಉತ್ತಮ ಆರಂಭ ನೀಡಿದರು. ನಂತರ ಮ್ಯಾಥ್ಯೂ ಶಾರ್ಟ್ (30) ಕೂಡ ತಕ್ಕಮಟ್ಟಿಗೆ ಕೊಡುಗೆ ನೀಡಿದರು.
ಮ್ಯಾಟ್ ರೇನ್ ಶಾ 58 ಎಸೆತಗಳಲ್ಲಿ 2 ಬೌಂಡರಿ ಒಳಗೊಂಡ 56 ರನ್ ಬಾರಿಸಿ ಅರ್ಧಶತಕದ ಗೌರವಕ್ಕೆ ಪಾತ್ರರಾದರು. ಅಲೆಕ್ಸ್ ಕ್ಯಾರಿ (24) ಮತ್ತು ಕೂಪರ್ ಕಾನ್ಲೆ (23) ನಂತರ ಬಂದ ಬ್ಯಾಟ್ಸ್ ಮನ್ ಗಳು ಬೇಗನೇ ಪೆವಿಲಿಯನ್ ಸೇರಿಕೊಂಡಿದ್ದರಿಂದ ತಂಡ ಮುಗ್ಗರಿಸಿತು.



