ರೊಮೆನಿಯಾ ಮತ್ತು ಸ್ಲೊವಾಕಿಯಾ ತಂಡಗಳು 1-1 ಗೋಲಿನಿಂದ ಡ್ರಾ ಮಾಡಿಕೊಂಡು ಯುರೋ ಕಪ್ ಫುಟ್ಬಾಲ್ ಟೂರ್ನಿಯಲ್ಲಿ ಪ್ರಿಕ್ವಾರ್ಟರ್ ಫೈನಲ್ ಪ್ರವೇಶಿಸಿದೆ.
ಮಂಗಳವಾರ ತಡರಾತ್ರಿ ನಡೆದ ಇ ಗುಂಪಿನ ಪಂದ್ಯದಲ್ಲಿ ರೊಮೆನಿಯಾ ಪರ ರಜ್ವಾನ್ ಮರಿನ್ (37ನೇ ನಿಮಿಷ) ಪೆನಾಲ್ಟಿಯನ್ನು ಗೋಲಾಗಿ ಪರಿವರ್ತಿಸಿ ತಂಡಕ್ಕೆ ಸಮಬಲದ ಗೌರವ ತಂದುಕೊಟ್ಟರೆ, ಸ್ಲೊವಾಕಿಯಾ ಪರ 24ನೇ ನಿಮಿಷದಲ್ಲಿ ಒಂಡ್ರೆಜ್ ಡುಡಾ ಗೋಲು ಗಳಿಸಿದರು.
ಎರಡೂ ತಂಡಗಳು ಆರಂಭದಲ್ಲೇ ಗೋಲು ಗಳಿಸಲು ಸತತ ದಾಳಿ ನಡೆಸಿದವು. ಸ್ಲೊವಾಕಿಯಾ ಆರಂಭದಲ್ಲೇ 11 ಬಾರಿ ಸತತ ದಾಳಿ ನಡೆಸಿ 11ನೇ ಪ್ರಯತ್ನದಲ್ಲಿ ಮೊದಲ ಗೋಲು ಬಾರಿಸಿತು. ಆದರೆ 15 ನಿಮಿಷಗಳ ಅಂತರದಲ್ಲಿ ಎಡವಟ್ಟು ಮಾಡಿಕೊಂಡು ಪೆನಾಲ್ಟಿಯನ್ನು ಕೊಟ್ಟು ಗೋಲು ಗಳಿಸುವ ಅವಕಾಶ ಮಾಡಿಕೊಟ್ಟಿತು.
ರೊಮಾನಿಯಾ ಸುಲಭ ಗೋಲು ಬಾರಿಸಿ ಮೊದಲ ಅವಧಿಯಲ್ಲೇ ಸಮಬಲ ಸಾಧಿಸಿತು. ಎರಡನೇ ಅವಧಿಯ ಆಟದಲ್ಲಿ ನೀರಸ ಪ್ರದರ್ಶನ ಕಂಡು ಬಂದಿದ್ದು ಯಾವುದೇ ಗೋಲು ದಾಖಲಾಗದ ಕಾರಣ ಡ್ರಾದಲ್ಲಿ ಅಂತ್ಯಗೊಂಡಿತು.
ಇ ಗುಂಪಿನ 4 ತಂಡಗಳು ಆಡಿದ 3 ಪಂದ್ಯಗಳಲ್ಲಿ ತಲಾ 4 ಅಂಕ ಪಡೆದು ಅಚ್ಚರಿ ಮೂಡಿಸಿದವು. ಮತ್ತೊಂದು ಪಂದ್ಯದಲ್ಲಿ ಬೆಲ್ಜಿಯಂ ತಂಡ 0-0 ಗೋಲಿನಿಂದ ಉಕ್ರೇನ್ ವಿರುದ್ಧ ಡ್ರಾ ಸಾಧಿಸಿ 2ನೇ ಸ್ಥಾನಿಯಾಗಿ ನಾಕೌಟ್ ಪ್ರವೇಶಿಸಿತು. ಸ್ಲೊವಾಕಿಯಾ 3ನೇ ಸ್ಥಾನ ಪಡೆದು ಪ್ರೀ ಕ್ವಾರ್ಟರ್ ಫೈನಲ್ ಪ್ರವೇಶಿಸಿತು.