ಉಕ್ರೇನ್ ಮೇಲೆ ಸತತ ಎರಡನೇ ದಿನವೂ ರಷ್ಯಾ ಬಾಂಬ್ ಗಳ ಸುರಿಮಳೆಗೈದಿದ್ದು, ಕನಿಷ್ಠ 4 ಮಂದಿ ಅಸುನೀಗಿದ್ದಾರೆ.
ಸೋಮವಾರ 200ಕ್ಕೂ ಹೆಚ್ಚು ಕ್ಷಿಪಣಿ ಮತ್ತು ಡ್ರೋಣ್ ಗಳ ಮೂಲಕ ದಾಳಿ ನಡೆಸಿದ್ದ ರಷ್ಯಾ ಸೇನೆ ಮಂಗಳವಾರ ಈ ದಾಳಿಯನ್ನು ಮುಂದುವರಿಸಿದ್ದು, ಈ ಬಾರಿ ಉಕ್ರೇನ್ ರಾಜಧಾನಿ ಕೀವ್ ಕೇಂದ್ರೀಕರಿಸಿ ದಾಳಿ ನಡೆಸಿದೆ.
ಉಕ್ರೇನ್ ಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಭೇಟಿ ಮಾಡಿ ಮರಳಿದ ಬೆನ್ನಲ್ಲೇ ರಷ್ಯಾ ಭಾರೀ ದಾಳಿ ನಡೆಸಿರುವುದು ವಿಶೇಷ.
ರಷ್ಯಾ ಬಾಂಬ್ ಗಳ ಸುರಿಮಳೆ ಸುರಿಸಿದ್ದರಿಂದ ಹೋಟೆಲೊಂದರಲ್ಲಿ ತಂಗಿದ್ದ ಇಬ್ಬರು ಮೃತಪಟ್ಟಿದ್ದು, ಅವರ ದೇಹಗಳು ಛಿದ್ರಗೊಂಡಿದ್ದರಿಂದ ಗುರುತು ಪತ್ತೆಯಾಗಿಲ್ಲ.
ರಷ್ಯಾ ದಾಳಿಯನ್ನು ಮತ್ತಷ್ಟು ತೀವ್ರಗೊಳಿಸಲಿದ್ದು, ಉಕ್ರೇನ್ ನಲ್ಲಿ ಅಡಗಿದವರನ್ನು ಹೊರಗೆ ತರಲು ಆಗುತ್ತಿಲ್ಲ. ರಷ್ಯಾದೊಳಗೆ ನುಸುಳಿರುವ ಉಕ್ರೇನ್ ಸೇನೆಯನ್ನು ಹಿಮ್ಮೆಟ್ಟಿಸಲು ರಷ್ಯಾ ಈ ತಂತ್ರ ಅನುಸರಿಸಿದೆ ಎಂದು ಹೇಳಲಾಗುತ್ತಿದೆ.
ಸೋಮವಾರ ಡ್ರೋಣ್ ಮತ್ತು ಯುದ್ಧ ವಿಮಾನಗಳನ್ನು ಬಳಸಿದ್ದ ರಷ್ಯಾ ಮಂಗಳವಾರ ಮಿಗ್ 31 ಸೂಪರ್ ಸಾನಿಕ್, ಟಿಯು 85 ಮುಂತಾದ ಪ್ರಬಲ ಯುದ್ಧ ವಿಮಾನಗಳನ್ನು ಬಾಂಬ್ ದಾಳಿಗೆ ಬಳಸಿದೆ. ದಾಳಿಯ ಯಶಸ್ಸಿನ ಬಗ್ಗೆ ರಷ್ಯಾ ಯಾವುದೇ ಹೇಳಿಕೆ ನೀಡಿಲ್ಲ.