Monday, June 15, 2026
Google search engine
Homeಕ್ರೀಡೆಬ್ರಂಟ್‌ ಶತಕದ ಮುಂದೆ ನಡೆಯದ ರಿಚಾ ಆರ್ಭಟ: ಮುಂಬೈ ವಿರುದ್ಧ ಆರ್‌ ಸಿಬಿಗೆ ವೀರೋಚಿತ ಸೋಲು

ಬ್ರಂಟ್‌ ಶತಕದ ಮುಂದೆ ನಡೆಯದ ರಿಚಾ ಆರ್ಭಟ: ಮುಂಬೈ ವಿರುದ್ಧ ಆರ್‌ ಸಿಬಿಗೆ ವೀರೋಚಿತ ಸೋಲು

ಕೆಳ ಕ್ರಮಾಂಕದಲ್ಲಿ ರಿಚಾ ಘೋಷ್‌ ಹೋರಾಟದ ಹೊರತಾಗಿಯೂ ಆರ್‌ ಸಿಬಿ 15 ರನ್‌ ಗಳಿಂದ ವೀರೋಚಿತ ಸೋಲುಂಡರೆ, ಮುಂಬೈ ಇಂಡಿಯನ್ಸ್‌ ಡಬ್ಲೂಪಿಎಲ್‌ ಟಿ-20 ಟೂರ್ನಿಯಲ್ಲಿ ಫೈನಲ್‌ ಆಸೆ ಜೀವಂತವಾಗಿರಿಸಿಕೊಂಡಿದೆ.

ವಡೋದರಾದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಮುಂಬೈ ಇಂಡಿಯನ್ಸ್‌ ಸಿವರ್‌ ಬ್ರಂಟ್‌ ಚೊಚ್ಚಲ ಶತಕದ ನೆರವಿನಿಂದ 20 ಓವರ್‌ ಗಳಲ್ಲಿ 4 ವಿಕೆಟ್‌ ಕಳೆದುಕೊಂಡು 199 ರನ್‌ ಸಂಪಾದಿಸಿತು. ಕಠಿಣ ಗುರಿ ಬೆಂಬತ್ತಿದ ಆರ್‌ ಸಿಬಿ 20 ಓವರ್‌ ಗಳಲ್ಲಿ 9 ವಿಕೆಟ್‌ ಕಳೆದುಕೊಂಡು 184 ರನ್‌ ಗಳಿಸಲಷ್ಟೇ ಶಕ್ತವಾಯಿತು.

ಬೃಹತ್‌ ಮೊತ್ತ ಬೆಂಬತ್ತಿದ ಆರ್‌ ಸಿಬಿ ಆಟಗಾರ್ತಿಯರು ಹೊಡಿಬಡಿ ಆಟಕ್ಕೆ ಮುಂದಾಗಿ ವಿಕೆಟ್‌ ಕೈಚೆಲ್ಲಿದ್ದರಿಂದ ೩೫ ರನ್‌ ಗೆ ೫ ವಿಕೆಟ್‌ ಕಳೆದುಕೊಂಡು ತತ್ತರಿಸಿತು. ಈ ನಂತರ ಕೆಳ ಕ್ರಮಾಂಕದ ಬ್ಯಾಟ್ಸ್‌ ಮನ್‌ ಗಳು ತೋರಿದ ದಿಟ್ಟ ಹೋರಾಟದಿಂದ ಗೆಲುವಿನ ಸಮೀಪ ಬಂದರೂ ರನ್‌ ಸರಾಸರಿ ಕಾಯ್ದುಕೊಳ್ಳಲ್ ಸಾಧ್ಯವಾಗದೇ ಮಂಡಿಯೂರಿತು.

ರಿಚಾ ಘೋಷ್‌ ಮತ್ತು ನದಿನ್‌ ಡಿ ಕ್ಲಾರ್ಕ್‌ 6ನೇ ವಿಕೆಟ್‌ ಗೆ 42 ರನ್‌ ಜೊತೆಯಾಟ ನಿಭಾಯಿಸಿ ಚೇತರಿಕೆ ನೀಡಿದರು. ಕ್ಲಾರ್ಕ್‌ 20 ಎಸೆತಗಳಲ್ಲಿ 3 ಬೌಂಡರಿ ಮತ್ತು 1 ಸಿಕ್ಸರ್‌ ಒಳಗೊಂಡ 28 ರನ್‌ ಬಾರಿಸಿ ಔಟಾದರು.

ನಂತರ ಬಂದ ಅರುಂಧತಿ ಜೊತೆಗೂಡಿದ ರಿಚಾ ಸಿಡಿಲಬ್ಬರದ ಬ್ಯಾಟಿಂಗ್‌ ನಿಂದ ಗೆಲುವಿನ ಭರವಸೆ ಮೂಡಿಸಿದರು. ಅರುಂಧತಿ (14) ಜೊತೆ 52 ರನ್‌ ಪೇರಿಸಿದ ರಿಚಾ ನಂತರ ಪ್ರಿಯಾಂಕಾ ಪಾಟೀಲ್‌ ಜೊತೆ 75 ರನ್‌ ಗಳಿಸಿದರು. ಇದರಲ್ಲಿ ಪ್ರಿಯಾಂಕಾ ಪಾತ್ರ ಕೇವಲ 12 ರನ್‌ ಆಗಿತ್ತು. 30 ಎಸೆತಗಳಲ್ಲಿ 30 ರನ್‌ ಗಳಿಸಿದ್ದ ರಿಚಾ ನಂತರ 20 ಎಸೆತಗಳಲ್ಲಿ 60 ರನ್‌ ಚಚ್ಚಿದರು.

ಅಂತಿಮವಾಗಿ ರಿಚಾ 50 ಎಸೆತಗಳಲ್ಲಿ 10 ಬೌಂಡರಿ ಮತ್ತು 6 ಸಿಕ್ಸರ್‌ ಒಳಗೊಂಡ 90 ರನ್‌ ಬಾರಿಸಿ ಕೊನೆಯ ಎಸೆತದಲ್ಲಿ ಔಟಾದರು.

ಮುಂಬೈ ಇಂಡಿಯನ್ಸ್‌ ಪರ ಹ್ಯಾಲಿ ಮ್ಯಾಥ್ಯೂಸ್‌ 3, ಶಬಮಿನ್‌ ಇಸ್ಮಾಯಿಲ್‌ ಮತ್ತು ಅಮೆಲಾ ಕೆರ್‌ ತಲಾ 2 ವಿಕೆಟ್‌ ಪಡೆದು ಆರ್‌ ಸಿಬಿ ಗೆಲುವಿನ ಆಸೆಗೆ ತಣ್ಣಿರೆರಚಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments