ಕೊಲೆ ಪ್ರಕರಣದ ಆರೋಪ ಎದುರಿಸುತ್ತಿರುವ ನಟ ದರ್ಶನ್ ಅವರನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಬಳ್ಳಾರಿ ಜೈಲಿಗೆ ಸ್ಥಳಾಂತರಿಸಲು ಬೆಂಗಳೂರಿನ ಸೆಷನ್ಸ್ ನ್ಯಾಯಾಲಯ ಒಪ್ಪಿಗೆ ಸೂಚಿಸಿದೆ.
ದರ್ಶನ್ ಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ನೀಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದ್ದು, ರೌಡಿಗಳ ಸಂಪರ್ಕದ ಜೊತೆಗೆ ಸಿಗರೇಟು, ಹಾಸಿಗೆ, ವೀಡಿಯೋ ಕಾಲ್ ಮಾಡಲು ಅವಕಾಶ ಸೇರಿದಂತೆ ಹಲವು ವಿಶೇಷ ಆತಿಥ್ಯ ದೊರೆತಿತ್ತು ಎಂಬ ವರದಿಗಳು ಬಂದಿದ್ದವು.
ದರ್ಶನ್ ಅವರನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರಿಸಲು ಅನುಮತಿ ಕೋರಿ ಪೊಲೀಸರು ನ್ಯಾಯಾಲಯದ ಮೊರೆ ಹೋಗಿದ್ದರು. ವಿಚಾರಣೆ ಕೈಗೆತ್ತಿಕೊಂಡ 24ನೇ ಎಸಿಎಂಎಂ ನ್ಯಾಯಾಲಯ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳನ್ನು ಬೇರೆ ಬೇರೆ ಜೈಲಿಗೆ ಸ್ಥಳಾಂತರಿಸಲು ಸಮ್ಮತಿ ಸೂಚಿಸಿದೆ.
ಮೈಸೂರು ಜೈಲಿಗೆ ನಂದೀಶ್, ಪವನ್, ರಾಘವೇಂದ್ರ, ಪರಪ್ಪನ ಅಗ್ರಹಾರ ಜೈಲಿನಲ್ಲಿ ಪವಿತ್ರಾ ಗೌಡ, ಶಿವಮೊಗ್ಗಕ್ಕೆ ಜಗದೀಶ್ ಮತ್ತು ಲಕ್ಷ್ಮಣ್, ಧಾರವಾಡಕ್ಕೆ ಧನರಾಜ್, ವಿಜಯಪುರ ಜಿಲ್ಲೆಗೆ ವಿನಯ್, ಕಲಬುರಗಿ ಜೈಲಿಗೆ ನಾಗರಾಜ್, ಬೆಳಗಾವಿಗೆ ಪ್ರದೋಶ್ ಅವರನ್ನು ಸ್ಥಳಾಂತರಿಸಲಾಗುವುದು. ಪ್ರಕರಣದಲ್ಲಿ ಈಗಾಗಲೇ ನಾಲ್ವರು ಆರೋಪಿಗಳು ತುಮಕೂರು ಜೈಲಿನಲ್ಲಿದ್ದಾರೆ.
ನ್ಯಾಯಾಲಯದ ಆದೇಶದ ಪ್ರತಿ ದೊರೆತ ಕೂಡಲೇ ಆರೋಪಿಗಳನ್ನು ಸಂಬಂಧಪಟ್ಟ ಜೈಲುಗಳಿಗೆ ಸ್ಥಳಾಂತರಿಸುವ ಪ್ರಕ್ರಿಯೆ ಆರಂಭವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.