ಹಿಂಸಾಚಾರ ಭುಗಿಲೆದ್ದ ಹಿನ್ನೆಲೆಯಲ್ಲಿ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ ಭಾರತದ ಮೂಲಕ ಲಂಡನ್ ಗೆ ಹಾರಲಿದ್ದಾರೆ.
73 ವರ್ಷದ ಶೇಖ್ ಹಸೀನಾ 5 ಬಾರಿ ಬಾಂಗ್ಲಾದೇಶದ ಪ್ರಧಾನಿ ಹುದ್ದೆ ಅಲಂಕರಿಸಿದ್ದು ಕಳೆದ ಕೆಲವು ತಿಂಗಳಿಂದ ನಡೆಯುತ್ತಿರುವ ಹಿಂಸಾಚಾರದಲ್ಲಿ 300ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದರು. ಹಿಂಸಾಚಾರ ಹತ್ತಿಕ್ಕಲು ವಿಫಲವಾದ ಹಿನ್ನೆಲೆಯಲ್ಲಿ ಶೇಖ್ ಹಸೀನಾ ಸೋಮವಾರ ಮಧ್ಯಾಹ್ನ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು.
ಶೇಖ್ ಹಸೀನಾ ರಾಜೀನಾಮೆ ನೀಡಿದ ಬೆನ್ನಲ್ಲೇ ಭಾರತಕ್ಕೆ ಆಗಮಿಸಿದ್ದಾರೆ. ಭಾರತಕ್ಕೆ ಬಂದ ಕೆಲವೇ ಕ್ಷಣಗಳಲ್ಲಿ ಲಂಡನ್ ಗೆ ಹಾರಲಿದ್ದಾರೆ ಎಂದು ಹೇಳಲಾಗಿದೆ.
ಶೇಖ್ ಹಸೀನಾ ರಾಜೀನಾಮೆ ಹಿನ್ನೆಲೆಯಲ್ಲಿ ದೇಶದ ಆಡಳಿತದ ಮೇಲೆ ಹಿಡಿತ ಸಾಧಿಸಿರುವ ಸೇನೆ, ಶೀಘ್ರದಲ್ಲೇ ಮಧ್ಯಂತರ ಸರ್ಕಾರ ನೇಮಿಸುವುದಾಗಿ ಘೋಷಿಸಿದೆ.
ಬಾಂಗ್ಲಾದೇಶದ ಸೇನಾ ಮುಖ್ಯಸ್ಥ ಜನರಲ್ ವಾಕರ್ ಉಜ್ ಜಮಾನ್ ದೂರದರ್ಶನದ ನೇರ ಪ್ರಸಾರದಲ್ಲಿ ಮಾತನಾಡಿ, ದೇಶದ ಆಡಳಿತವನ್ನು ಹಿಡಿತಕ್ಕೆ ಪಡೆಯಲಾಗಿದ್ದು, ಪ್ರತಿಪಕ್ಷ ಮುಖಂಡರ ಜೊತೆ ಮಾತುಕತೆ ನಡೆಸುತ್ತಿದ್ದು, ಶೀಘ್ರದಲ್ಲೇ ಮಧ್ಯಂತರ ಸರ್ಕಾರ ರಚನೆಗೆ ಕ್ರಮ ಕೈಗೊಳ್ಳುವುದಾಗಿ ಘೋಷಿಸಿದ್ದಾರೆ.
ನಿಮ್ಮ ಬೇಡಿಕೆಗಳನ್ನು ಶೀಘ್ರದಲ್ಲೇ ಬಗೆಹರಿಸಲಾಗುವುದು. ನಾನು ವಚನ ನೀಡುತ್ತಿದ್ದೇನೆ ಎಲ್ಲವೂ ಸರಿ ಮಾಡುತ್ತೇನೆ. ನಿಮ್ಮ ಆಸ್ತಿಪಾಸ್ತಿ ಮತ್ತು ಜೀವಹಾನಿ ತಡೆಯುತ್ತೇವೆ. ಆದ್ದರಿಂದ ಕೂಡಲೇ ಹಿಂಸಾಚಾರ ನಿಲ್ಲಿಸಿ ಎಂದು ವಾಕರ್ ಉಜ್ ಜಮಾನ್ ಜನತೆಗೆ ಮನವಿ ಮಾಡಿದ್ದಾರೆ.