ಗುಂಪೊಂದು 50ಕ್ಕೂ ಹೆಚ್ಚು ಹಸುಗಳನ್ನು ಹರಿಯುವ ನದಿಯಲ್ಲಿ ಎಸೆದಿದ್ದರಿಂದ 15-ರಿಂದ 20 ಹಸುಗಳು ಮೃತಪಟ್ಟಿರುವ ಆಘಾತಕಾರಿ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಸಾತ್ನಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಘಟನೆ ಸಂಬಂಧ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.
ಶನಿವಾರ ಸಂಜೆ ಬಮ್ಮೊರ್ ಪ್ರದೇಶ ಬಳಿಯ ರೈಲ್ವೆ ಸೇತುವೆ ಮೇಲಿಂದ ಸಾತ್ನಾ ನದಿಗೆ ಹಸುಗಳನ್ನು ಎಸೆಯಲಾಗಿದೆ. ಹಸುಗಳನ್ನು ನದಿಗೆ ಎಸೆಯುತ್ತಿರುವ ವೀಡಿಯೋ ವೈರಲ್ ಆಗಿದ್ದು, ಕೂಡಲೇ ನಾಗೋದ್ ಪೊಲೀಸರು ತನಿಖೆಗೆ ಇಳಿದು ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬಂಧಿಸಲಾದ ಆರೋಪಿಗಳಾದ ಬೇಟಾ ಭಗ್ರಿ, ರವಿ ಭಾಗ್ರಿ, ರಾಂಪಲ್ ಚೌಧರಿ ಮತ್ತು ರಜುಲು ಚೌಧರಿಯನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದು, ಹಸುಗಳನ್ನು ನದಿಗೆ ಯಾಕೆ ಎಸೆಯಲಾಯಿತು ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ಪ್ರಾಥಮಿಕ ಮಾಹಿತಿ ಪ್ರಕಾರ 50 ಹಸುಗಳನ್ನು ನದಿಗೆ ಎಸೆಯಲಾಗಿದ್ದು, 15ರಿಂದ 20 ಹಸುಗಳು ಮೃತಪಟ್ಟಿವೆ. ನದಿಗೆ ಬಿದ್ದ ಹಸುಗಳ ರಕ್ಷಣಾ ಕಾರ್ಯ ಭರದಿಂದ ಸಾಗಿದೆ. ಅಲ್ಲದೇ ಹಸುಗಳ ನಿರ್ದಿಷ್ಟ ಸಂಖ್ಯೆಯ ಮಾಹಿತಿ ಸಂಗ್ರಹಿಸಲಾಗುತ್ತಿದೆ.