ಕಣ್ಣಿಗೆ ಲೆನ್ಸ್ ಬಳಸಿದ್ದರಿಂದ ಕಿರುತೆರೆ ನಟಿಯೊಬ್ಬರು ಕಣ್ಣಿನ ದೃಷ್ಟಿಯನ್ನೇ ಕಳೆದುಕೊಳ್ಳುವ ಸ್ಥಿತಿಗೆ ಸಿಲುಕಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.
ಕಿರುತೆರೆ ನಟಿ ಜಾಸ್ಮಿನ್ ಭಾಸಿನ್ ಕಣ್ಣಿನ ಲೆನ್ಸ್ ಬಳಸಿದ್ದರಿಂದ ದೃಷ್ಟಿ ಕಳೆದುಕೊಂಡಿದ್ದಾಗಿ ಹೇಳಿಕೊಂಡಿದ್ದು, ಕಣ್ಣಿಗೆ ಬ್ಯಾಂಡೇಜ್ ಹಾಕಿರುವ ಫೋಟೊವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
ರಾಜಧಾನಿ ದೆಹಲಿಯಲ್ಲಿ ಜುಲೈ 17ರಂದು ನಿಗದಿಯಾಗಿದ್ದ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಲು ಧರಿಸಿದ್ದ ಲೆನ್ಸ್ ಗಳಲ್ಲಿ ಏನು ತಪ್ಪಾಗಿದೆ ಎಂದು ತಿಳಿದಿಲ್ಲ. ಆದರೆ ಇದರಿಂದ ಕಣ್ಣನ್ನೇ ಕಳೆದುಕೊಳ್ಳುವಂತಾಗಿದೆ ಎಂದು ನಟಿ ಜಾಸ್ಮಿನ್ ಭಾಸಿನ್ ದುಃಖ ತೋಡಿಕೊಂಡಿದ್ದಾರೆ.
ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತಯಾರಾಗುತ್ತಿದ್ದೆ. ನನ್ನ ಲೆನ್ಸ್ ಗಳಲ್ಲಿ ಏನು ತಪ್ಪಾಗಿದೆ ಎಂದು ನನಗೆ ತಿಳಿದಿಲ್ಲ, ಆದರೆ ಅವುಗಳನ್ನು ಧರಿಸಿದ ನಂತರ ನನ್ನ ಕಣ್ಣುಗಳಲ್ಲಿ ನೋವು ಕಾಣಿಸಿಕೊಂಡಿತು. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕಿದ್ದರಿಂದ ನಂತರ ವೈದ್ಯರಿಗೆ ತೋರಿಸಲು ನಿರ್ಧರಿಸಿದ್ದೆ ಎಂದರು.
ಕಾರ್ಯಕ್ರಮದಲ್ಲಿ ನಾನು ನೋವಿನ ನಡುವೆಯೇ ಲೆನ್ಸ್ ಧರಿಸಿದ್ದೆ. ಆದರೆ ಕಾರ್ಯಕ್ರಮ ಮುಗಿಯುವುದರೊಳಗೆ ನನಗೆ ಏನೂ ಕಾಣಿಸುತ್ತಿರಲಿಲ್ಲ. ಆಯೋಜಕರು ನನಗೆ ನೆರವು ನೀಡಿ ಕಣ್ಣಿನ ತಜ್ಞರ ಬಳಿ ಹೋದೆವು. ಪರಿಶೀಲಿಸಿದ ಅವರು ಕಾರ್ನಿಯಾಗೆ ಹಾನಿಯಾಗಿದೆ ಎಂದು ಹೇಳಿ ಬ್ಯಾಂಡೇಜ್ ಹಾಕಿದ್ದಾರೆ ಎಂದು ನಟಿ ಘಟನೆಯನ್ನು ವಿವರಿಸಿದ್ದಾರೆ.
ನಾನು ಮುಂಬೈಗೆ ಮರಳಿದ ನಂತರ ಚಿಕಿತ್ಸೆಯನ್ನು ಮುಂದುವರಿಸಿದೆ. ನಾನು ಸಾಕಷ್ಟು ನೋವನ್ನು ಅನುಭವಿಸುತ್ತಿದ್ದೇನೆ. ಮುಂದಿನ ನಾಲ್ಕೈದು ದಿನಗಳಲ್ಲಿ ನಾನು ಚೇತರಿಸಿಕೊಳ್ಳಬೇಕು ಎಂದು ವೈದ್ಯರು ಹೇಳಿದ್ದಾರೆ. ಆದರೆ ಅಲ್ಲಿಯವರೆಗೆ, ನಾನು ನನ್ನ ಕಣ್ಣುಗಳನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂದು ಜಾಸ್ಮೀನ್ ಹೇಳಿದ್ದಾರೆ.
ಇದು ಸುಲಭವಲ್ಲ. ಏಕೆಂದರೆ ನನಗೆ ನೋಡಲು ಸಾಧ್ಯವಾಗುತ್ತಿಲ್ಲ. ನೋವಿನಿಂದಾಗಿ ನಾನು ಮಲಗಲು ಸಹ ಹೆಣಗಾಡುತ್ತಿದ್ದೇನೆ ಎಂದು ತಿಳಿಸಿದ್ದಾರೆ. ಜಾಸ್ಮಿನ್ ಶೀಘ್ರದಲ್ಲೇ ಕೆಲಸಕ್ಕೆ ಮರಳುವ ಭರವಸೆ ಹೊಂದಿದ್ದಾರೆ. ಅದೃಷ್ಟವಶಾತ್, ನಾನು ನನ್ನ ಯಾವುದೇ ಕೆಲಸವನ್ನು ಮುಂದೂಡಬೇಕಾಗಿಲ್ಲ. ನಾನು ಚೇತರಿಸಿಕೊಂಡು ಕೆಲವೇ ದಿನಗಳಲ್ಲಿ ಕೆಲಸಕ್ಕೆ ಮರಳುತ್ತೇನೆ ಎಂದು ಭಾವಿಸುತ್ತೇನೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.