ಮುಂಬೈ: ಟೀಂ ಇಂಡಿಯಾಗೆ ನೀಡಲಾಗಿದ್ದ ಪ್ರಾಯೋಜಕತ್ವದಿಂದ ಡ್ರೀಮ್ 11 ಹಿಂದೆ ಸರಿದಿದೆ. ಆದರೆ ಬಿಸಿಸಿಐ ದಂಡ ವಿಧಿಸದೇ ಇರುವುದು ಅಚ್ಚರಿ ಮೂಡಿಸಿದೆ.
2023ರಿಂದ 3 ವರ್ಷಗಳ ಅವಧಿಗೆ ಟೀಂ ಇಂಡಿಯಾಗೆ 358 ಕೋಟಿ ರೂ.ಗೆ ಪ್ರಾಯೋಜಕತ್ವ ವಹಿಸಿಕೊಂಡಿದ್ದ ಡ್ರೀಮ್ ಇಲೆವೆನ್ ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಆನ್ ಲೈನ್ ಗೇಮಿಂಗ್ ನಿಷೇಧಿಸಿ ಮಸೂದೆ ಮಂಡಿಸಿದ ಬೆನ್ನಲ್ಲೇ ಪ್ರಾಯೋಜಕತ್ವದಿಂದ ಹಿಂದೆ ಸರಿಯುವುದಾಗಿ ಘೋಷಿಸಿದೆ.
ಬೈಜೂಸ್ ಸಂಸ್ಥೆ ನಷ್ಟದ ಹಿನ್ನೆಲೆಯಲ್ಲಿ ಬಿಸಿಸಿಐನೊಂದಿಗೆ ಟೀಮ್ ಇಂಡಿಯಾ ಜೆರ್ಸಿ ಪ್ರಾಯೋಜಕತ್ವದ ಒಪ್ಪಂದದಿಂದ ಹಿಂದೆ ಸರಿದಿತ್ತು. ಈ ಹಿನ್ನೆಲೆಯಲ್ಲಿ 2023ರಲ್ಲಿ ಡ್ರೀಮ್ 11 ಬಿಸಿಸಿಐ ಜೊತೆ 358 ಕೋಟಿ ರೂ.ಗೆ ಮೂರು ವರ್ಷ ಜೆರ್ಸಿ ಒಪ್ಪಂದಕ್ಕೆ ಸಹಿ ಹಾಕಿತ್ತು.
ಒಪ್ಪಂದದ ನಿಯಮಗಳಂತೆ, ಕಾನೂನು ಕಾರಣಗಳಿಂದ ಅರ್ಧದಲ್ಲೇ ಆ್ಯಪ್ ನಿಷೇಧಗೊಂಡರೆ ಅಥವಾ ರದ್ದಾದರೆ ಯಾವುದೇ ದಂಡ ವಿಧಿಸಲಾಗುವುದಿಲ್ಲ ಎಂಬ ಷರತ್ತು ವಿಧಿಸಿತ್ತು. ಇದೇ ಕಾರಣದಿಂದ ಅರ್ಧದಲ್ಲೇ ಡ್ರೀಮ್ 11 ಪ್ರಾಯೋಜಕತ್ವದಿಂದ ಹಿಂದೆ ಸರಿದರೂ ಬಿಸಿಸಿಐ ಯಾವುದೇ ದಂಡ ವಿಧಿಸಿಲ್ಲ.
ಸೆಪ್ಟೆಂಬರ್ 9ರಂದು ಯುಎಇಯಲ್ಲಿ ಪ್ರಾರಂಭವಾಗಲಿರುವ ಏಷ್ಯಾಕಪ್‌ಗೆ ಬಿಸಿಸಿಐ ಜೆರ್ಸಿ ಪ್ರಾಯೋಜಕತ್ವ ಇಲ್ಲದೇ ಕಣಕ್ಕಿಳಿಯುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಬಿಸಿಸಿಐ ಹೊಸ ಪ್ರಾಯೋಜಕರ ಹುಡುಕಾಟ ನಡೆಸಿದೆ.
ಡ್ರೀಮ್ 11 ಪ್ರಸ್ತುತ ಹಲವಾರು ಐಪಿಎಲ್ ಫ್ರಾಂಚೈಸಿಗಳ ಪ್ರಾಯೋಜಕತ್ವ ಹೊಂದಿದೆ. ಹೊಸ ಕಾನೂನಿನ ಕಾರಣದಿಂದಾಗಿ ಆ ಒಪ್ಪಂದಗಳನ್ನೂ ರದ್ದುಗೊಳಿಸಬಹುದು ಎಂಬ ಮಾತುಗಳು ಕೇಳಿಬರುತ್ತಿವೆ.
ಆನ್‌ಲೈನ್ ಗೇಮಿಂಗ್ ನಿಷೇಧ ಮಸೂದೆ: ರಾಷ್ಟ್ರಪತಿ ದ್ರೌಪದಿ ಮುರ್ಮು ಶುಕ್ರವಾರ ಆನ್‌ಲೈನ್ ಗೇಮಿಂಗ್ ಮಸೂದೆಗೆ ಅನುಮೋದನೆ ನೀಡಿದ್ದು, ಕಾಯ್ದೆಯಾಗಿದೆ. ಸ್ಕಿಲ್ ಗೇಮ್ಸ್ (ಡ್ರೀಮ್ ಇಲೆವೆನ್), ಗ್ಯಾಂಬ್ಲಿಂಗ್ ಆನ್‌ಲೈನ್ ಬೆಟ್ಟಿಂಗ್ ಒಳಗೊಂಡ ಆಟಗಳೂ ಸಹ ನಿಷೇಧದಡಿಯಲ್ಲಿ ಬರುತ್ತವೆ. ಇದರ ಜೊತೆಗೆ, ಆನ್‌ಲೈನ್ ಬೆಟ್ಟಿಂಗ್ ಗೇಮ್ಗಳಿಗೆ ಸಂಬಂಧಿಸಿದ ಜಾಹೀರಾತು ಮತ್ತು ಹಣಕಾಸು ವಹಿವಾಟುಗಳನ್ನೂ ನಿಷೇಧಿಸಲಾಗಿದೆ.
ಇ-ಸ್ಫೋರ್ಟ್ಸ್ಗಳಿಗೆ ಕಾನೂನು ಮಾನ್ಯತೆ: ಸರ್ಕಾರ ಇ-ಸ್ಪೋರ್ಟ್ಸ್ (ವಿಡಿಯೋ ಗೇಮ್, ಪ್ಲೇಸ್ಟೇಷನ್ ಗೇಮ್ಸ್, ಸಾಧನಗಳನ್ನು ಬಳಸಿ ಮನೊರಂಜನೆಗಾಗಿ ಆಡುವ ಆಟಗಳು) ಉತ್ತೇಜಿಸುವ ಗುರಿ ಹೊಂದಿದೆ. ಹಿಂದೆ ಕಾನೂನು ಮಾನ್ಯತೆ ಇಲ್ಲದ ಈ ವಲಯ ಈಗ ಅಧಿಕೃತ ಬೆಂಬಲ ಪಡೆಯಲಿದೆ. ಇ-ಕ್ರೀಡೆಗಳಿಗೆ ಬೆಂಬಲ ನೀಡಲು ಯುವಜನ ಮತ್ತು ಕ್ರೀಡಾ ಸಚಿವಾಲಯದ ಆಶ್ರಯದಲ್ಲಿ ವಿಶೇಷ ವ್ಯವಸ್ಥೆಗಳನ್ನು ಮಾಡಲಾಗುತ್ತದೆ. ಒಟ್ಟಾರೆ, ಆನ್‌ಲೈನ್ ಗೇಮಿಂಗ್ ಮಸೂದೆಯೊಂದಿಗೆ, Dream11 ಜೊತೆ BCCI ಒಪ್ಪಂದವನ್ನು ರದ್ದುಗೊಳಿಸಿದ್ದು ಭವಿಷ್ಯದಲ್ಲಿ ಭಾರತೀಯ ಕ್ರಿಕೆಟ್ ತಂಡದ ಹೊಸ ಪ್ರಾಯೋಜಕರಾಗಿ ಯಾರು ಬರುತ್ತಾರೆ ಎಂಬುದು ಕುತೂಹಲಕಾರಿಯಾಗಿದೆ.


