ಕೌಲಾಲಂಪುರ: ಆರಂಭಿಕ ಆಟಗಾರ್ತಿ ತ್ರಿಶಾ (49) ಮತ್ತು ವೇಗಿಗಳ ಅತ್ಯುತ್ತಮ ದಾಳಿಯ ನೆರವಿನಿಂದ ಭಾರತ ತಂಡ ಶ್ರೀಲಂಕಾ ವಿರುದ್ಧ 60 ರನ್ ಜಯ ಸಾಧಿಸಿ ಅಂಡರ್ 19 ಮಹಿಳಾ ಟಿ20 ವಿಶ್ವಕಪ್‌ನ ಸೂಪರ್ ಸಿಕ್ಸ್ ಹಂತ ತಲುಪಿದೆ.
ಈ ಜಯದ ಮೂಲಕ ‘ಎ’ ಗುಂಪಿನಲ್ಲಿ ಅಗ್ರಸ್ಥಾನ ಪಡೆದು ಭಾರತ ತಂಡವು ಸೂಪರ್ ಸಿಕ್ಸ್ ಗೆ ಪ್ರವೇಶಿಸಿದೆ. ತ್ರಿಷಾ 44 ಎಸೆತಗಳಲ್ಲಿ ರನ್ ಬಾರಿಸುವ ಮೂಲಕ ಭಾರತವನ್ನು 9 ವಿಕೆಟ್ ನಷ್ಟಕ್ಕೆ 118 ರನ್ ಗಳಿಗೆ ಮುಟ್ಟಿಸಿದರು.
119 ರನ್ ಗುರಿ ಬೆನ್ನತ್ತಿದ ಲಂಕಾ ಬ್ಯಾಟರ್ ಗಳಿಗೆ ಭಾರತದ ವೇಗಿಗಳಾದ ವಿ.ಜೆ. ಜೋಶಿತಾ ಮತ್ತು ಶಬ್ನಮ್ ಬಹುವಾಗಿ ಕಾಡಿದರು. 3.2 ಓವರ್‌ಗಳಲ್ಲಿ 9 ರನ್‌ಗೆ 4 ವಿಕೆಟ್ ಉರುಳಿಸಿದರು.
ನಾಯಕಿ ಮನುಡಿ ನಾನಾಯಕ್ಕರ ಅವರ ರನೌಟ್ ಆಗುವುದರೊಂದಿಗೆ ಲಂಕಾ 12 ರನ್ ಗೆ 5 ವಿಕೆಟ್ ಕಳೆದುಕೊಂಡು ತೀವ್ರ ಸಂಕಷ್ಟಕ್ಕೆ ಸಿಲುಕಿತ್ತು. ಆ ಬಳಿ ಲಂಕಾ ತಂಡವು ಚೇತರಿಸಿಕೊಳ್ಳದೆ 20 ಓವರ್‌ಗಳ ಅಂತ್ಯಕ್ಕೆ 9 ವಿಕೆಟ್ ನಷ್ಟಕ್ಕೆ ಕೇವಲ 58 ರನ್ ಗಳಿಸಲಷ್ಟೇ ಶಕ್ತವಾಯಿತು.
ರಶ್ಮಿಕಾ ಸೆವ್ವಂಡಿ ಗಳಿಸಿದ 15 ರನ್ ಲಂಕಾ ಪರ ಬ್ಯಾಟರ್ ಗಳಿಸಿದ ಗರಿಷ್ಠ ಮೊತ್ತವಾಗಿದೆ. ಅಲ್ಲದೆ, ಇದೊಂದೇ ಎರಡಂಕಿಯ ಮೊತ್ತವಾಗಿದೆ. ಭಾರತದ ಪರ ವೇಗಿಗಳಾದ ವಿ.ಜೆ. ಜೋಶಿತಾ ಮತ್ತು ಶಬ್ನಮ್, ಸ್ಪಿನ್ನರ್ ಪರುಣಿಕಾ ಸಿಸೋಡಿಯಾ ತಲಾ 2 ವಿಕೆಟ್ ಉರುಳಿಸಿದರು.
ಇದಕ್ಕೂ ಮುನ್ನ ಭಾರತದ ಬ್ಯಾಟಿಂಗ್ ಕೂಡ ಅಲೆಗಳ ಮೇಲೆಯೇ ತೇಲಿತು. ಆದರೆ ಪಂದ್ಯಶ್ರೇಷ್ಠರು ಎನಸಿದ ತ್ರಿಷಾ ಅವರು ಹಾಲಿ ಚಾಂಪಿಯನ್ನರನ್ನು ತಮ್ಮ ಸಾಮರ್ಥ್ಯದಿಂದ ಒಟ್ಟಿಗೆ ಹಿಡಿದಿಟ್ಟರು. ಈ ಬಲಗೈ ಬ್ಯಾಟರ್ ಹೆಚ್ಚು ಬುದ್ಧಿವಂತಿಕೆಯಿಂದ ಆಡಿದ್ದಲ್ಲದೇ ಅಗತ್ಯ ಬಿದ್ದಾಗ ಆಕ್ರಮಣಕಾರಿ ಮನೋಭಾವವನ್ನೂ ತೋರಿದರು.
ಬಳಿಕ ಜೋಶಿತಾ ಮತ್ತು ಮಿಥಿಲಾ ವಿನೋದ್ ಅವರ ಸಮಯೋಚಿತ ಪ್ರದರ್ಶನ ಕೆಳ ಕ್ರಮಾಂಕದಲ್ಲಿ ಕೆಲವು ಅಮೂಲ್ಯ ರನ್‌ಗಳನ್ನು ಸೇರಿಸಲು ಭಾರತಕ್ಕೆ ಸಹಾಯ ಮಾಡಿದವು. ಗುಂಪು ಹಂತದ ಎಲ್ಲ ಮೂರು ಪಂದ್ಯಗಳನ್ನು ಜಯಿಸುವ ಮೂಲಕ ಭಾರತ ತಂಡ ಸೂಪರ್ 6 ಹಂತ ಪ್ರವೇಶಿಸಿತು.