ಭಾರತ ಕ್ರಿಕೆಟ್ ತಂಡದ ಆಟಗಾರರ ನೆಟ್ ಅಭ್ಯಾಸದ ವೇಳೆ ಅಭಿಮಾನಿಗಳು ನೂಕುನುಗ್ಗಲು ನಡೆಸಿದ್ದೂ ಅಲ್ಲದೇ ‘ಅಸಭ್ಯ’ ರೀತಿಯಲ್ಲಿ ನಡೆದುಕೊಂಡು ಅಪಮಾನ ಮಾಡಿರುವ ಘಟನೆ ಅಡಿಲೇಡ್ ಮೈದಾನದಲ್ಲಿ ನಡೆದಿದೆ.
ಪರ್ತ್ ನಲ್ಲಿ ನಡೆದ ಮೊದಲ ಪಂದ್ಯ ಗೆದ್ದು ಬಾರ್ಡರ್-ಗವಾಸ್ಕರ್ ಟ್ರೋಫಿಗಾಗಿ ನಡೆಯುತ್ತಿರುವ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಮುನ್ನಡೆ ಸಧಿಸಿರುವ ಭಾರತ ತಂಡ ಶುಕ್ರವಾರದಿಂದ ಆರಂಭವಾಗಲಿರುವ ಎರಡನೇ ಟೆಸ್ಟ್ ಪಂದ್ಯಕ್ಕೆ ಅಭ್ಯಾಸ ನಡೆಸುತ್ತಿದೆ.
ಭಾರತೀಯ ಆಟಗಾರರು ಅಡಿಲೇಡ್ ಮೈದಾನದಲ್ಲಿ ನಡೆಯಲಿರುವ ಪಿಂಕ್ ಟೆಸ್ಟ್ ಗಾಗಿ ನೆಟ್ ಅಭ್ಯಾಸ ನಡೆಸುತ್ತಿರುವುದನ್ನು ವೀಕ್ಷಿಸಲು ಕ್ರಿಕೆಟ್ ಆಸ್ಟ್ರೇಲಿಯಾ ಅಭಿಮಾನಿಗಳಿಗೆ ಪ್ರವೇಶ ಕಲ್ಪಿಸಿತ್ತು. ಆದರೆ ಆಟಗಾರರನ್ನು ನೋಡಿ ಆನಂದಿಸುವ ಬದಲು ಕ್ರಿಕೆಟಿಗರ ಜೊತೆ ಅನುಚಿತವಾಗಿ ವರ್ತಿಸಿದ್ದಾರೆ.
ಮಂಗಳವಾರ ನೆಟ್ ಅಭ್ಯಾಸದ ವೇಳೆ ಮೈದಾನಕ್ಕೆ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸಿದ್ದರು. ಮೈದಾನದ ಪಕ್ಕದಲ್ಲಿಯೇ ಹಾಕಲಾಗಿದ್ದ ನೆಟ್ ನಲ್ಲಿ ಅಭ್ಯಾಸ ಮಾಡುತ್ತಿದ್ದ ಆಟಗಾರರಿಗೆ ಕೆಲವು ಅಭಿಮಾನಿಗಳು ಅಶ್ಲೀಲವಾಗಿ ನಿಂದಿಸಿ ಅಪಮಾನಿಸಿದ್ದಾರೆ.
ನೆಟ್ ಅಭ್ಯಾಸಕ್ಕೆ ಅಭಿಮಾನಿಗಳಿಗೆ ಪ್ರವೇಶಾವಕಾಶ ಕಲ್ಪಿಸಿದ ಕುರಿತು ಆಕ್ರೋಶ ವ್ಯಕ್ತಪಡಿಸಿ ಬಿಸಿಸಿಐ ಕ್ರಿಕೆಟ್ ಆಸ್ಟ್ರೇಲಿಯಾಗೆ ಪತ್ರ ಬರೆದಿದೆ. ಇದರ ಬೆನ್ನಲ್ಲೇ ಎಚ್ಚೆತ್ತುಕೊಂಡ ಸಂಸ್ಥೆ ಪ್ರೇಕ್ಷಕರಿಗೆ ಮೈದಾನದೊಳಗೆ ಪ್ರವೇಶ ನಿರ್ಬಂಧಿಸಿದೆ.
ಆಸ್ಟ್ರೇಲಿಯಾ ಆಟಗಾರರು ನೆಟ್ ಅಭ್ಯಾಸ ನಡೆಸುವಾಗ 300ಕ್ಕಿಂತ ಹೆಚ್ಚು ಜನರು ಇರಲಿಲ್ಲ. ಆದರೆ ಭಾರತೀಯರು ಅಭ್ಯಾಸ ನಡೆಸುವ ವೇಳೆ 5000ಕ್ಕೂ ಅಧಿಕ ಜನರು ಆಗಮಿಸಿದ್ದರು. ಇಷ್ಟೊಂದು ಜನ ಬಂದಿದ್ದರಿಂದ ಅಲ್ಲಿ ಗೊಂದಲ ವಾತಾವರಣ ಸೃಷ್ಟಿಯಾಗಿತ್ತು ಎಂದು ಬಿಸಿಸಿಐ ಅಧಿಕಾರಿ ಘಟನೆಯನ್ನು ವಿವರಿಸಿದ್ದಾರೆ.
ಅಭಿಮಾನಿಗಳು ಕೆಟ್ಟದಾಗಿ ನಡೆದುಕೊಂಡು ದಾಂಧಲೆ ಎಬ್ಬಿಸುವ ರೀತಿ ಮಾಡಿದ್ದರಿಂದ ಭಾರತದ ಆಟಗಾರರು ಅಭ್ಯಾಸವನ್ನು ಮೊಟಕುಗೊಳಿಸಬೇಕಾಯಿತು ಎಂದು ಅಧಿಕಾರಿ ವಿವರಿಸಿದ್ದಾರೆ.
https://twitter.com/mufaddal_vohra/status/1864205925474857262