Thursday, December 25, 2025
Google search engine
Homeಕ್ರೀಡೆಮಂದಾನ, ಪ್ರತಿಕಾ ಸಿಡಿಲಬ್ಬರದ ಶತಕ: ವನಿತೆಯರ ವಿಶ್ವಕಪ್ ಸೆಮೀಸ್ ಗೆ ಭಾರತ ಲಗ್ಗೆ

ಮಂದಾನ, ಪ್ರತಿಕಾ ಸಿಡಿಲಬ್ಬರದ ಶತಕ: ವನಿತೆಯರ ವಿಶ್ವಕಪ್ ಸೆಮೀಸ್ ಗೆ ಭಾರತ ಲಗ್ಗೆ

ಗೆಲ್ಲಲೇಬೇಕಾದ ಪಂದ್ಯದಲ್ಲಿ ಆರಂಭಿಕರಾದ ಸ್ಮೃತಿ ಮಂದಾನ ಮತ್ತು ಪ್ರತೀಕಾ ರಾವಲ್ ಸಿಡಿಸಿದ ಶತಕಗಳ ನೆರವಿನಿಂದ ಭಾರತ ತಂಡ 53 ರನ್ ಗಳ ಭಾರೀ ಅಂತರದಿಂದ ನ್ಯೂಜಿಲೆಂಡ್ ತಂಡವನ್ನು ಮಣಿಸಿ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಸೆಮಿಫೈನಲ್ ಗೆ ಲಗ್ಗೆ ಹಾಕಿದೆ.

ಮುಂಬೈನ ಡಿವೈ ಪಾಟೀಲ್ ಸ್ಪೋರ್ಟ್ಸ್ ಅಕಾಡೆಮಿ ಮೈದಾನದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ವನಿತೆಯರ ತಂಡ ಮಳೆಯಿಂದ ಆಟ ನಿಂತಾಗ 49 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು 340 ರನ್ ಗಳ ಬೃಹತ್ ಮೊತ್ತ ಸಂಪಾದಿಸಿತು.

ಡಕ್ ವರ್ತ್ ಲೂಯಿಸ್ ನಿಯಮದಡಿ ನ್ಯೂಜಿಲೆಂಡ್ ಗೆ 44 ಓವರ್‌ಗಳಲ್ಲಿ 325 ರನ್ ಗುರಿ ನೀಡಲಾಯಿತು. ಆದರೆ ನ್ಯೂಜಿಲೆಂಡ್ 8 ವಿಕೆಟ್ ಕಳೆದುಕೊಂಡು 271 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಗೆಲುವಿನೊಂದಿಗೆ, ಭಾರತ ವನಿತೆಯರ ತಂಡ ಸೆಮಿಫೈನಲ್‌ ಪ್ರವೇಶಿಸಿತು.

ಹ್ಯಾಲಿಡೇ 84 ಎಸೆತಗಳಲ್ಲಿ ಒಂಬತ್ತು ಬೌಂಡರಿಗಳು ಮತ್ತು ಒಂದು ಸಿಕ್ಸರ್ ಸೇರಿದಂತೆ 81 ರನ್ ಗಳಿಸಿದರು. ಇಸ್ತಾಬೆಲ್ ಗೇಜ್ 51 ಎಸೆತಗಳಲ್ಲಿ 10 ಬೌಂಡರಿಗಳು ಸೇರಿದಂತೆ ಅಜೇಯ 65 ರನ್ ಗಳಿಸಿದರು. ಅಮೆಲಾ ಕೆರ್ 53 ಎಸೆತಗಳಲ್ಲಿ 4 ಬೌಂಡರಿಯೊಂದಿಗೆ 43 ರನ್ ಬಾರಿಸಿದರು. ಈ ಮೂವರು ಹೋರಾಟ ನಡೆಸಿದರೂ ರನ್ ಸರಾಸರಿ ಕಾಯ್ದುಕೊಳ್ಳಲು ಸಾಧ್ಯವಾಗದೇ ಕಿವೀಸ್ ಸೋಲುಂಡಿತು.

ಭಾರತದ ಪರ ರೇಣುಕಾ ಸಿಂಗ್, ಕ್ರಾಂತಿ ಗೌಡ್ ತಲಾ 2 ವಿಕೆಟ್ ಪಡೆದರೆ, ಉಳಿದವರು ತಲಾ 1 ವಿಕೆಟ್ ಗಳಿಸಿದರು.

ಸ್ಮೃತಿ, ಪ್ರತಿಕಾ ಶತಕದ ಅಬ್ಬರ

ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಭಾರತ ತಂಡದ ಪರ ಅರಂಭಿಕ ಆಟಗಾರ್ತಿಯರಾದ ಸ್ಮೃತಿ ಮಂದಾನ ಮತ್ತು ಪ್ರತಿಕಾ ರಾವಲ್ ವೈಯಕ್ತಿಕ ಶತಕಗಳನ್ನು ಬಾರಿಸಿ ತಂಡಕ್ಕೆ ಅತ್ಯಗತ್ಯವಾಗಿದ್ದ ಸಂದರ್ಭದಲ್ಲಿ ಬೃಹತ್ ಮೊತ್ತ ಪೇರಿಸಲು ನೆರವಾದರು. ಅಲ್ಲದೇ ವಿಶ್ವಕಪ್ ನಲ್ಲಿ ಭಾರತ ಅತ್ಯಧಿಕ ಮೊತ್ತ ದಾಖಲಿಸಿದ ಗೌರವಕ್ಕೂ ಪಾತ್ರವಾಯಿತು.

ಪ್ರತಿಕಾ 134 ಎಸೆತಗಳಲ್ಲಿ 13 ಬೌಂಡರಿ ಮತ್ತು 2 ಸಿಕ್ಸರ್ ಸಿಡಿಸಿ 122 ರನ್ ಗಳಿಸಿದರೆ, ಸ್ಮೃತಿ 95 ಎಸೆತಗಳಲ್ಲಿ 10 ಬೌಂಡರಿಗಳು ಮತ್ತು 4 ಸಿಕ್ಸರ್‌ಗಳೊಂದಿಗೆ 109 ರನ್‌ಗಳ ಕೊಡುಗೆ ನೀಡಿದರು. ಇಬ್ಬರಿಬ್ಬರು ಮೊದಲ ವಿಕೆಟ್ ಗೆ 212 ರನ್ ಚಚ್ಚಿ ಬೃಹತ್ ಮೊತ್ತದ ಸೂಚನೆ ನೀಡಿದರು.

ಜೆಮಿಮಾ ರೊಡ್ರಿಗಸ್ ಕೇವಲ 55 ಎಸೆತಗಳನ್ನು ಎದುರಿಸಿ 11 ಬೌಂಡರಿಗಳೊಂದಿಗೆ ಅಜೇಯವಾಗಿ 76 ರನ್ ಗಳಿಸಿ ತಂಡದ ಮೊತ್ತ 300ರ ಗಡಿ ದಾಟುವಂತೆ ನೋಡಿಕೊಂಡರು.

ಭಾರತದ ಈ ಗೆಲುವಿನೊಂದಿಗೆ ಸೆಮಿಫೈನಲ್ ರೇಸ್ ನಲ್ಲಿದ್ದ ನ್ಯೂಜಿಲೆಂಡ್, ಶ್ರೀಲಂಕಾ ಮತ್ತು ಬಾಂಗ್ಲಾದೇಶ ತಂಡಗಳು ಟೂರ್ನಿಯಿಂದ ಹೊರಬಿದ್ದವು. ಇಂಗ್ಲೆಂಡ್, ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಈಗಾಗಲೇ ಸೆಮಿಫೈನಲ್‌ಗೆ ಅರ್ಹತೆ ಪಡೆದುಕೊಂಡಿವೆ.

ಅಕ್ಟೋಬರ್ 25 ರಂದು ನಡೆಯಲಿರುವ ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ನಡುವಿನ ಪಂದ್ಯದಲ್ಲಿ ಅಗ್ರಸ್ಥಾನಿಗಳ ನಿರ್ಧಾರವಾಗಲಿದೆ. ಒಂದು ವೇಳೆ ಈ ಪಂದ್ಯ ಮಳೆಯಿಂದಾಗಿ ರದ್ದುಗೊಂಡರೆ, ಆಸ್ಟ್ರೇಲಿಯಾ ಅಗ್ರಸ್ಥಾನದಲ್ಲಿ ಉಳಿಯುತ್ತದೆ. ಆಗ ಪಾಯಿಂಟ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿರುವ ಭಾರತ ಅಕ್ಟೋಬರ್ 30 ರಂದು ಸೆಮಿಫೈನಲ್‌ನಲ್ಲಿ ಟೇಬಲ್ ಟಾಪರ್ ಅನ್ನು ಎದುರಿಸಲಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments