ನವದೆಹಲಿ: ಕ್ರೀಡಾಪಟುಗಳನ್ನು ಗುರುತಿಸುವುದು ಮತ್ತು ಬೆಳೆಸುವುದು, ಪಾರದರ್ಶಕ ಆಯ್ಕೆಗೆ ಅನುವು ಮಾಡಿಕೊಡುವುದು ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಕ್ರೀಡಾಪಟುಗಳ ಕಾರ್ಯಕ್ಷಮತೆ ಹೆಚ್ಚಿಸಲು ತಜ್ಞರ ಸಮಿತಿಯನ್ನು ರಚಿಸಲಾಗಿದೆ.paes, sainam mary
ಇದಕ್ಕಾಗಿ ಕ್ರೀಡಾ ಸಚಿವ ಮನ್ಸುಖ್ ಮಾಂಡವಿಯಾ ನೇತೃತ್ವದಲ್ಲಿ ಮೂವರು ಒಲಿಂಪಿಕ್ ಪದಕ ವಿಜೇತರನ್ನು ಸದಸ್ಯರನ್ನಾಗಿ ಒಳಗೊಂಡ ಸಮಿತಿಯನ್ನು ಸರ್ಕಾರ ರಚಿಸಿದೆ.
೧೭ ಸದಸ್ಯರ ಕ್ರೀಡಾ ತಜ್ಞರ ಸಲಹಾ ಸಮಿತಿಯಲ್ಲಿ ಖ್ಯಾತ ಬಾಕ್ಸರ್ ಮೇರಿ ಕೋಮ್, ಟೆನಿಸ್ ದಂತಕಥೆ ಲಿಯಾಂಡರ್ ಪೇಸ್ ಮತ್ತು ಟ್ರಯಲ್ ಬ್ಲೇಜರ್ ಶಟ್ಲರ್ ಸೈನಾ ನೆಹ್ವಾಲ್ ಸದಸ್ಯರಾಗಿದ್ದಾರೆ. ಕೇಂದ್ರ ಕ್ರೀಡಾ ಖಾತೆ ರಾಜ್ಯ ಸಚಿವ ರಕ್ಷಾ ಖಾಡ್ಸೆ ಉಪಾಧ್ಯಕ್ಷರಾಗಿದ್ದು, ಕ್ರೀಡಾ ಕಾರ್ಯದರ್ಶಿ/ ಜಂಟಿ ಕಾರ್ಯದರ್ಶಿ ಸಂಚಾಲಕರಾಗಿರುತ್ತಾರೆ.
ಈ ಸಮಿತಿಯು ಸರ್ಕಾರಿ ಪ್ರತಿನಿಧಿಗಳು ಮತ್ತು ವಿವಿಧ ಕ್ರೀಡೆಗಳ ನಿವೃತ್ತ ಪ್ರಖ್ಯಾತ ಕ್ರೀಡಾಪಟುಗಳನ್ನು ಒಳಗೊಂಡಿದೆ ಎಂದು ಕ್ರೀಡಾ ಸಚಿವಾಲಯ ಶನಿವಾರ ಹೊರಡಿಸಿದ ಸುತ್ತೋಲೆಯಲ್ಲಿ ತಿಳಿಸಿದೆ.
ಶೈನಿ ಅಬ್ರಹಾಂ (ಅಥ್ಲೆಟಿಕ್ಸ್), ಹೀನಾ ಸಿಧು (ಶೂಟಿಂಗ್), ಮೇಜರ್ ಜನರಲ್ ವಿ.ಕೆ.ಭಟ್ (ರೋಯಿಂಗ್), ಜಾಫರ್ ಇಕ್ಬಾಲ್ (ಹಾಕಿ), ಪಿ.ಕೆ.ಗರ್ಗ್ (ನೌಕಾಯಾನ), ಅರ್ಮಾಂಡೊ ಕೊಲಾಕೊ (ಫುಟ್ಬಾಲ್), ಅಶೋಕ್ ಕುಮಾರ್ (ಕುಸ್ತಿ), ಭಾನು ಸಚ್ದೇವ್ (ಈಜು), ಪಾರುಲ್ ದನ್ಸುಖ್ ಭಾಯ್ ಪಾರ್ಮರ್ (ಪ್ಯಾರಾ ಬ್ಯಾಡ್ಮಿಂಟನ್), ಟಾಪ್ಸ್ ಸಿಇಒ ಮತ್ತು ಸಾಯ್ನ ಕಾರ್ಯನಿರ್ವಾಹಕ ನಿರ್ದೇಶಕರು ಈ ಸಮಿತಿಯಲಿದ್ದಾರೆ.


