ನವದೆಹಲಿ: ಪ್ಯಾರಿಸ್ ಒಲಿಂಪಿಕ್ಸ್ 2024ರಲ್ಲಿ ವಿಜೇತರಿಗೆ ನೀಡಲಾದ ಪದಕಗಳು ಬಣ್ಣ ಬದಲಿಸುತ್ತಿರುವ ಆರೋಪಗಳ ಹಿನ್ನೆಲೆಯಲ್ಲಿ ಹೊಸ ಪದಕಗಳನ್ನು ನೀಡಲು ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ ನಿರ್ಧರಿಸಿದೆ.
ಶೂಟಿಂಗ್ ಸ್ಪರ್ಧೆಯಲ್ಲಿ 2 ಕಂಚಿನ ಪದಕಗಳನ್ನು ಗೆದ್ದು ಮನು ಭಾಕರ್ ಇತಿಹಾಸ ನಿರ್ಮಿಸಿದ್ದರು. ಭಾರತದ ಕೀರ್ತಿ ಪಾತಾಕೆ ಮುಗಿಲೆತ್ತರಕ್ಕೇರಲು ಕಾರಣವಾಗಿದ್ದ ಈ ಪದಕಗಳನ್ನು ಹಿಂಪಡೆಯಲು ಒಲಿಂಪಿಕ್ಸ್ ಆಯೋಜಕರು ನಿರ್ಧರಿಸಿದ್ದಾರೆ. ಇದಕ್ಕೆ ಮುಖ್ಯ ಕಾರಣ ಪದಕಗಳ ಬಣ್ಣಗಳಲ್ಲಿ ಕಂಡು ಬರುತ್ತಿರುವ ಬದಲಾವಣೆ.
ಈ ಬಾರಿಯ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ನೀಡಲಾದ ಪದಕಗಳ ಬಣ್ಣಗಳು ಬದಲಾಗುತ್ತಿವೆ ಎಂಬ ದೂರು ಕೇಳಿ ಬಂದಿವೆ. ಹೀಗಾಗಿ ಮನು ಭಾಕರ್ ಸೇರಿದಂತೆ ವಿಶ್ವದ ಎಲ್ಲಾ ಕ್ರೀಡಾಪಟುಗಳಿಂದ ಪದಕಗಳನ್ನು ಹಿಂಪಡೆಯಲು ಒಲಿಂಪಿಕ್ಸ್ ಆಯೋಜಕರು ನಿರ್ಧರಿಸಿದ್ದಾರೆ. ಅಲ್ಲದೆ ಅದಕ್ಕೆ ಬದಲಾಗಿ ಹೊಸ ಪದಕಗಳನ್ನು ನೀಡುವುದಾಗಿ ತಿಳಿಸಿದ್ದಾರೆ.
ವಿಜೇತರಿಂದ ದೂರು:
ಈ ಬಾರಿ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಪದಕ ಗೆದ್ದಿರುವ ಹಲವು ಕ್ರೀಡಾಪಟುಗಳ ಮೆಡಲ್ಗಳ ಬಣ್ಣ ಬದಲಾಗಿವೆ. ಕಳಪೆ ಗುಣಮಟ್ಟದ ಪದಕಗಳ ಚಿತ್ರಗಳನ್ನು ಕೆಲ ಕ್ರೀಡಾಪಟುಗಳು ಸಾಮಾಜಿಕ ಮಾಧ್ಯಮದ ಮೂಲಕ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಗಮನ ಸೆಳೆದಿದ್ದರು.
ಇದರ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಪ್ಯಾರಿಸ್ ಒಲಿಂಪಿಕ್ಸ್ ಆಯೋಜಕರು ಪದಕಗಳನ್ನು ಹಿಂಪಡೆಯಲು ನಿರ್ಧರಿಸಿದ್ದಾರೆ. ಅಲ್ಲದೆ ಹೊಚ್ಚಹೊಸದಾಗಿ ಮಾಡಿದ ನಂತರ ಆಟಗಾರರಿಗೆ ಪದಕಗಳನ್ನು ಹಿಂತಿರುಗಿಸಲಾಗುವುದು ಎಂದು ತಿಳಿಸಿದೆ.
ಪ್ಯಾರಿಸ್ ಒಲಿಂಪಿಕ್ ಸಂಘಟನಾ ಸಮಿತಿಯು ಮೊನೈ ಡಿ ಪ್ಯಾರಿಸ್ ಎನ್ನುವ ಕಂಪೆನಿಗೆ ಪದಕ ಮಾಡುವ ಗುತ್ತಿಗೆಯನ್ನು ನೀಡಿತ್ತು.
ಇದು ಫ್ರಾನ್ಸ್ ದೇಶದ ನಾಣ್ಯಗಳು ಮತ್ತು ಇತರ ಕರೆನ್ಸಿಗಳನ್ನು ಉತ್ಪಾದಿಸುವ ಸರ್ಕಾರಿ ಸ್ವಾಮ್ಯದ ಕಂಪನಿಯಾಗಿದೆ. ಇದೀಗ ದೂರು ಬಂದ ಹಿನ್ನಲೆ ಮೊನೈ ಡಿ ಪ್ಯಾರಿಸ್ ಕಂಪೆನಿ ಕ್ರೀಡಾಪಟುಗಳ ಹಾನಿಗೊಳಗಾದ ಪದಕಗಳನ್ನು ಬದಲಾಯಿಸಲು ನಿರ್ಧರಿಸಿದೆ.
ಇದರ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಪ್ಯಾರಿಸ್ ಒಲಿಂಪಿಕ್ಸ್ ಆಯೋಜಕರು ಪದಕಗಳನ್ನು ಹಿಂಪಡೆಯಲು ನಿರ್ಧರಿಸಿದ್ದಾರೆ. ಅಲ್ಲದೆ ಹೊಚ್ಚಹೊಸದಾಗಿ ಮಾಡಿದ ನಂತರ ಆಟಗಾರರಿಗೆ ಪದಕಗಳನ್ನು ಹಿಂತಿರುಗಿಸಲಾಗುವುದು ಎಂದು ತಿಳಿಸಿದೆ.