ಕನ್ನಡಿಗ ಕೆಎಲ್ ರಾಹುಲ್ ಅಜೇಯ ಆಟದಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡ 6 ವಿಕೆಟ್ ಗಳಿಂದ ಗೆದ್ದು ಐಪಿಎಲ್ ಟಿ-20 ಟೂರ್ನಿಯಲ್ಲಿ ಸತತ 4ನೇ ಗೆಲುವು ದಾಖಲಿಸಿ ವಿಜೃಂಭಿಸಿದರೆ, ಆರ್ ಸಿಬಿ ತವರಿನಲ್ಲೇ ಸತತ 2ನೇ ಬಾರಿ ಮುಖಭಂಗ ಅನುಭವಿಸಿದೆ.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಆರ್ ಸಿಬಿ ಬ್ಯಾಟಿಂಗ್ ನಲ್ಲಿ ಮುಗ್ಗರಿಸಿ 20 ಓವರ್ ಗಳಲ್ಲಿ 7 ವಿಕೆಟ್ ಗೆ 163 ರನ್ ಗಳಿಸಿತು. ಸಾಧಾರಣ ಗುರಿ ಬೆಂಬತ್ತಿದ ಡೆಲ್ಲಿ ಕ್ಯಾಪಿಟಲ್ಸ್ 17.5 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು ಜಯಭೇರಿ ಬಾರಿಸಿತು.
ಡೆಲ್ಲಿ ಕ್ಯಾಪಿಟಲ್ಸ್ ಆಡಿದ 4 ಪಂದ್ಯಗಳಲ್ಲಿ ನಾಲ್ಕರಲ್ಲಿ ಗೆದ್ದು 8 ಅಂಕ ಸಂಪಾದಿಸಿದ್ದರೂ ರನ್ ಸರಾಸರಿಯಲ್ಲಿ ಹಿಂದೆ ಬಿದ್ದು 2ನೇ ಸ್ಥಾನದಲ್ಲಿಯೇ ಉಳಿದುಕೊಂಡರೆ, ಆರ್ ಸಿಬಿ 5 ಪಂದ್ಯಗಳಲ್ಲಿ 3 ಜಯ ಹಾಗೂ 2 ಸೋಲಿನೊಂದಿಗೆ 6 ಅಂಕದೊಂದಿಗೆ 3ನೇ ಸ್ಥಾನದಲ್ಲೇ ಉಳಿಯಿತು.
ಆರ್ ಸಿಬಿ ತಂಡಕ್ಕೆ ಕನ್ನಡಿಗರ ಕೆಎಲ್ ರಾಹುಲ್ ಕಬ್ಬಿಣದ ಕಡಲೆಯಾದರು. ರಾಹುಲ್ 53 ಎಸೆತಗಳಲ್ಲಿ 7 ಬೌಂಡರಿ ಮತ್ತು 6 ಸಿಕ್ಸರ್ ಸಹಾಯದಿಂದ 93 ರನ್ ಬಾರಿಸಿ ಅಜೇಯರಾಗಿ ಉಳಿದರು. ಶತಕ 7 ರನ್ ಗಳಿಂದ ತಪ್ಪಿದರೂ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು.
ಒಂದು ಹಂತದಲ್ಲಿ ಡೆಲ್ಲಿ 58 ರನ್ ಗೆ 4 ವಿಕೆಟ್ ಕಳೆದುಕೊಂಡು ಆತಂಕಕ್ಕೆ ಒಳಗಾಗಿತ್ತು. ಈ ಹಂತದಲ್ಲಿ ರಾಹುಲ್ ಮತ್ತು ಟ್ರಿಸ್ಟನ್ ಸ್ಟಬ್ಸ್ ಮುರಿಯದ 5ನೇ ವಿಕೆಟ್ ಗೆ 111 ರನ್ ಜೊತೆಯಾಟದಿಂದ ತಂಡಕ್ಕೆ ಸುಲಭ ಗೆಲುವು ತಂದುಕೊಟ್ಟರು. ಸ್ಟಬ್ಸ್ 23 ಎಸೆತಗಳಲ್ಲಿ 4 ಬೌಂಡರಿ ಮತ್ತು 1 ಸಿಕ್ಸರ್ ಒಳಗೊಂಡ 38 ರನ್ ಬಾರಿಸಿ ಔಟಾಗದೇ ಉಳಿದರು.


