ಆಸ್ಟ್ರೇಲಿಯಾದ ಆರಂಭಿಕ ಸ್ಯಾಮ್ ಕೊನ್ಸಟಾಸ್ ವಿರುದ್ಧ ಅನುಚಿತ ವರ್ತನೆ ತೋರಿದ್ದಕ್ಕಾಗಿ ಭಾರತ ತಂಡದ ಸ್ಟಾರ್ ಬ್ಯಾಟ್ಸ್ ಮನ್ 1 ಪಂದ್ಯ ನಿಷೇಧ ಭೀತಿಯಿಂದ ಕೂದಲೆಳೆ ಅಂತರದಿಂದ ಪಾರಾಗಿದ್ದಾರೆ.
ಮೆಲ್ಬೋರ್ನ್ ನಲ್ಲಿ ಬುಧವಾರ ಆರಂಭಗೊಂಡ ೪ನೇ ಟೆಸ್ಟ್ ಪಂದ್ಯದ ಮೊದಲ ದಿನದಾಟದ ವೇಳೆ ಚೊಚ್ಚಲ ಪಂದ್ಯವಾಡಿದ ಯುವ ಬ್ಯಾಟ್ಸ್ ಮನ್ ಸ್ಯಾಮ್ ಕೊನ್ಸಟಾಸ್ ಅವರಿಗೆ ಉದ್ದೇಶಪೂರ್ವಕವಾಗಿ ವಿರಾಟ್ ಕೊಹ್ಲಿ ಡಿಕ್ಕಿ ಹೊಡೆದಿದ್ದರು.
ದೈಹಿಕವಾಗಿ ಹಲ್ಲೆ ನಡೆಸಿದ ರೀತಿಯಲ್ಲಿ ನಡೆದುಕೊಂಡ ರೀತಿಗೆ ವಿರಾಟ್ ಕೊಹ್ಲಿಗೆ ಒಂದು ಪಂದ್ಯ ನಿಷೇಧಕ್ಕೆ ಗುರಿಯಾಗು ಭೀತಿ ಎದುರಿಸಿದ್ದರು. ಆದರೆ ಐಸಿಸಿ ಪಂದ್ಯ ಶುಲ್ಕದ ಶೇ.20ರಷ್ಟು ದಂಡ ವಿಧಿಸಿತು. ಈ ಮೂಲಕ ಅವರು ೫ನೇ ಟೆಸ್ಟ್ ಪಂದ್ಯದಿಂದ ಹೊರಗುಳಿಯುವ ಭೀತಿಯಿಂದ ಪಾರಾಗಿದ್ದಾರೆ.
ಆಸ್ಟ್ರೇಲಿಯಾದ ಮೊದಲ ಇನಿಂಗ್ಸ್ ನ 10 ಮತ್ತು 11ನೇ ಓವರ್ ನಡುವೆ ಈ ಘಟನೆ ನಡೆದಿದ್ದು, ಸ್ಯಾಮ್ ಮತ್ತು ಕೊಹ್ಲಿ ಪರಸ್ಪರ ಡಿಕ್ಕಿ ಹೊಡೆದಿದ್ದರು. ವೀಕ್ಷಕ ವಿವರಣೆ ಮಾಡುತ್ತಿದ್ದ ಮಾಜಿ ನಾಯಕ ರಿಕಿ ಪಾಂಟಿಂಗ್, ಕೊಹ್ಲಿ ಉದ್ದೇಶಪೂರ್ವಕವಾಗಿ ಹೆಗಲು ತಾಗುವಂತೆ ಡಿಕ್ಕಿ ಹೊಡೆದಿದ್ದಾರೆ ಎಂದು ಆರೋಪಿಸಿದರು.
ವಿಚಾರಣೆ ವೇಳೆ ಕೊಹ್ಲಿ ಉದ್ದೇಶಪೂರ್ವಕವಾಗಿ ಡಿಕ್ಕಿ ಹೊಡೆದಿಲ್ಲ. ಅವರು ತಮ್ಮ ದಾರಿಯ ಬಗ್ಗೆ ಸ್ಪಷ್ಟವಾಗಿದ್ದರು. ಆದರೆ ಸ್ಯಾಮ್ ಓಡುವಾಗ ಗ್ಲೌಸ್ ಬದಲಿಸುವ ಕಡೆ ಗಮನ ಹರಿಸಿ ಬರುತ್ತಿದ್ದರಿಂದ ಡಿಕ್ಕಿಯಾಗಿದೆ ಎಂದು ಕ್ಯಾಮರಾ ದೃಶ್ಯಗಳು ಸ್ಪಷ್ಟವಾಗಿದ್ದವು.