ಅಭೂತಪೂರ್ವ ಗೆಲುವು ಪಡೆದಿದ್ದಕ್ಕಾಗಿ ಕಾಂಗ್ರೆಸ್ ಜೂನ್ 11ರಿಂದ 15ರವರೆಗೆ ಉತ್ತರ ಪ್ರದೇಶದ ಎಲ್ಲಾ 403 ವಿಧಾನಸಭಾ ಕ್ಷೇತ್ರಗಳಲ್ಲಿ ಧನ್ಯವಾದ ಯಾತ್ರೆ ನಡೆಸುವುದಾಗಿ ಘೋಷಿಸಿದೆ.
ಧನ್ಯವಾದ ಯಾತ್ರೆ ವೇಳೆ ಪಕ್ಷದ ಕಾರ್ಯಕರ್ತರು ಹಾಗೂ ವಿವಿಧ ಸಮುದಾಯದ ಮುಖಂಡರು ಕೂಡ ಪಾಲ್ಗೊಳ‍್ಳಲಿದ್ದಾರೆ ಎಂದು ಕಾಂಗ್ರೆಸ್ ಹೇಳಿಕೆಯಲ್ಲಿ ತಿಳಿಸಿದೆ.
ಯಾತ್ರೆ ವೇಳೆ ಸಾರ್ವಜನಿಕರಿಗೆ ಸಂವಿಧಾನದ ಪುಸ್ತಕವನ್ನು ಉಡುಗೊರೆಯಾಗಿ ನೀಡಲಿದ್ದು, ಸಂವಿಧಾನ ರಕ್ಷಣೆಗೆ ಮುಂದಾದ ಮತದಾರ ಪ್ರಭುಗಳಿಗೆ ಧನ್ಯವಾದ ಅರ್ಪಿಸಲಿದ್ದಾರೆ.
ಉತ್ತರ ಪ್ರದೇಶದ 80 ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ 6 ಸ್ಥಾನಗಳಲ್ಲಿ ಜಯಭೇರಿ ಬಾರಿಸಿದರೆ, ಮೈತ್ರಿ ಪಕ್ಷವಾದ ಸಮಾಜವಾದಿ 37ರಲ್ಲಿ ಗೆಲುವು ಸಾಧಿಸಿತ್ತು. ಈ ಮೂಲಕ ಎರಡೂ ಪಕ್ಷಗಳ ಮೈತ್ರಿಯಿಂದ ಬಿಜೆಪಿ 62 ಸ್ಥಾನಗಳಿಂದ 33 ಸ್ಥಾನಕ್ಕೆ ಕುಸಿದು ಆಘಾತ ಅನುಭವಿಸಿತು.
ಬಿಜೆಪಿ ಉತ್ತರ ಪ್ರದೇಶದಲ್ಲಿ ಕಳಪೆ ಪ್ರದರ್ಶನ ನೀಡಿದ್ದರಿಂದ ಬಹುಮತದ ಕೊರತೆ ಎದುರಿಸಿದ್ದು, ಮೊದಲ ಬಾರಿ ಮೋದಿ ನಾಯಕತ್ವದಲ್ಲಿ ಬಿಜೆಪಿ ಸ್ವಂತ ಬಲದ ಮೇಲೆ ಸರ್ಕಾರ ರಚಿಸಲು ವಿಫಲವಾಗಿದೆ.