ಬೆಂಗಳೂರಿನಲ್ಲಿ ಯು.ಎಸ್ ರಾಯಭಾರಿ ಕಚೇರಿಯನ್ನು ಆದ್ಯತೆ ಮೇರೆಗೆ ಆರಂಭಿಸಲು ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ನವದೆಹಲಿಯಲ್ಲಿರುವ ಭಾರತದಲ್ಲಿನ ಅಮೆರಿಕ ಸಂಯುಕ್ತ ಸಂಸ್ಥಾನಗಳ ರಾಯಭಾರಿ ಎರಿಕ್ ಗಾರ್ಸೆಟಿ, ಗ್ರಾನೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಭರವಸೆ ನೀಡಿದ್ದಾರೆ.
ಸಚಿವ ಪ್ರಿಯಾಂಕ್ ಖರ್ಗೆ ಅವರು ನವದೆಹಲಿಯ ಯುಎಸ್ ರಾಯಭಾರ ಕಚೇರಿಯಲ್ಲಿ ರಾಯಭಾರಿ ಎರಿಕ್ ಗಾರ್ಸೆಟಿ ಅವರನ್ನು ಭೇಟಿ ಮಾಡಿ ಬೆಂಗಳೂರಿನಲ್ಲಿ ಯುಎಸ್ ರಾಯಭಾರಿ ಕಚೇರಿಯನ್ನು ಆರಂಭಿಸುವುದು ಸೇರಿದಂತೆ, ಕರ್ನಾಟಕದಲ್ಲಿ ಯುಎಸ್ ಬಂಡವಾಳ ಹೂಡಿಕೆ, ತಂತ್ರಜ್ಞಾನ ವಿನಿಮಯ ಸೇರಿದಂತೆ ಕೆಲವು ಪ್ರಮುಖ ವಿಷಯಗಳ ಬಗ್ಗೆ ಚರ್ಚೆ ನಡೆಸಿದರು.
ಬೆಂಗಳೂರು ಸೇರಿದಂತೆ ಕರ್ನಾಟಕದ ಹಲವೆಡೆಯಿಂದ ಯುಎಸ್ ಪಯಣ ಬೆಳೆಸುವವರು ಈಗ ಚೆನ್ನೈಗೆ ಹೋಗಬೇಕಿದೆ, ರಾಜ್ಯದ ನಾಗರಿಕರಿಗೆ ಅನುಕೂಲ ಕಲ್ಪಸುವ ಸಲುವಾಗಿ ಈಗಾಗಲೆ ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಅಮೆರಿಕ ರಾಯಭಾರಿ ಅವರಿಗೆ ಮನವಿ ಸಲ್ಲಿಸಿದ್ದಾರೆ ಎಂದು ಹೇಳಿದ ಪ್ರಿಯಾಂಕ್ ಖರ್ಗೆ ಅವರು ಈ ಸಂಬಂಧ ರಾಜ್ಯದ ಮುಖ್ಯಮಂತ್ರಿಗಳು ಬರೆದಿದ್ದ ಪತ್ರವನ್ನು ರಾಯಭಾರಿ ಎರಿಕ್ ಗಾರ್ಸೆಟಿ ಅವರಿಗೆ ಹಸ್ತಾಂತರಿಸಿದರು.
ಅಮೆರಿಕದಲ್ಲಿ ಈಗ ಅಧ್ಯಕ್ಷರ ಚುನಾವಣೆಯಲ್ಲಿ ಅಲ್ಲಿನ ಸರ್ಕಾರ ನಿರತವಾಗಿದೆ, ಚುನಾವಣೆ ಮುಗಿದ ಕೂಡಲೇ ಆದ್ಯತೆಯ ಮೇರೆಗೆ ಬೆಂಗಳೂರಿನಲ್ಲಿ ರಾಯಭಾರ ಕಚೇರಿಯನ್ನು ಆರಂಭಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ರಾಯಭಾರಿ ಎರಿಕ್ ಗಾರ್ಸೆಟಿ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಹೇಳಿದರು.
ಬೆಂಗಳೂರಿನಲ್ಲಿ ಯುಎಸ್ ರಾಯಭಾರಿ ಕಚೇರಿ ಆರಂಭವಾಗುವ ಕನ್ನಡಿಗರ ಬಹು ದಿನಗಳ ಕನಸು ಶೀಘ್ರದಲ್ಲೇ ಸಾಕಾರಗೊಳ್ಳಲಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.