ಕನ್ನಡಿಗರಿಗೆ ಖಾಸಗಿ ಉದ್ದಿಮೆಗಳಲ್ಲಿ ಮೀಸಲು ನೀಡುವ ಕಾಯ್ದೆ ಜಾರಿಗೆ ಮುಂದಾಗಿದ್ದ ರಾಜ್ಯ ಸರ್ಕಾರ ಉದ್ದಿಮೆದಾರರ ವ್ಯಾಪಕ ವಿರೋಧದ ಹಿನ್ನೆಲೆಯಲ್ಲಿ ಕೇವಲ 24 ಗಂಟೆಯಲ್ಲೇ ತಡೆ ವಿಧಿಸಿದೆ.
ಖಾಸಗಿ ಉದ್ದಿಮೆಗಳ ಆಡಳಿತ ಮಟ್ಟದಲ್ಲಿ ಶೇ.50ರಷ್ಟು, ಆಡಳಿತವಲ್ಲದ ಮಟ್ಟದಲ್ಲಿ ಶೇ.75 ಹಾಗೂ ಸಿ ಮತ್ತು ಡಿ ಮಟ್ಟದ ಹುದ್ದೆಗಳಲ್ಲಿ ಶೇ.100ರಷ್ಟು ಮೀಸಲು ನಿಗದಿಪಡಿಸಿ ರಾಜ್ಯ ಸರ್ಕಾರ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಿತ್ತು. ಅಲ್ಲದೇ ಈ ವಿಧೇಯಕವನ್ನು ವಿಧಾನಮಂಡಲ ಅಧಿವೇಶನದಲ್ಲಿ ಜಾರಿಗೆ ತರಲು ಮುಂದಾಗಿತ್ತು.
ಆದರೆ ಕಾಯ್ದೆ ಜಾರಿಗೆ ರಾಜ್ಯ ಸರ್ಕಾರ ಮುಂದಾಗಿದೆ ಎಂದು ತಿಳಿಯುತ್ತಿದ್ದಂತೆ ಉದ್ದಿಮೆ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಪ್ರತಿಭೆ ಬೇಕೆ ಹೊರತು ಮೀಸಲಾತಿಯಲ್ಲ ಎಂದು ಉದ್ದಿಮೆದಾರರು ಟೀಕೆ ವ್ಯಕ್ತಪಡಿಸಿದ್ದರು.
ಕೈಗಾರಿಕೋದ್ಯಮಿಗಳು ಟೀಕೆ ವ್ಯಕ್ತಪಡಿದ್ದು ಅಲ್ಲದೇ ಒತ್ತಡಪೂರ್ವಕವಾಗಿ ಕಾಯ್ದೆ ಜಾರಿಗೆ ತರಲು ಮುಂದಾದರೆ ಹೊರರಾಜ್ಯಗಳಿಗೆ ವಲಸೆ ಹೋಗಬಹುದು ಎಂದು ಆತಂಕ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ರಾಜ್ಯ ಸರಕಾರ ತರಾತುರಿಯಲ್ಲಿ ಕಾಯ್ದೆ ಜಾರಿಗೆ ಹಿಂದೇಟು ಹಾಕಿದ್ದು, ತಾತ್ಕಾಲಿಕ ತಡೆ ಹಾಕಿದೆ.
ಮಂಗಳವಾರ ಮಾಧ್ಯಮ ಪ್ರಕಟಣೆ ಹೊರಡಿಸಿದ ರಾಜ್ಯ ಸರ್ಕಾರ, ಖಾಸಗಿ ವಲಯದಲ್ಲಿ ಮೀಸಲಾತಿ ನೀಡುವ ವಿಧೇಯಕವನ್ನು ಪುನರ್ ಪರಿಶೀಲಿಸಲಾಗುವುದು. ಸದ್ಯದ ಮಟ್ಟಿಗೆ ತಾತ್ಕಾಲಿಕ ತಡೆ ನೀಡಲಾಗಿದೆ ಎಂದು ಹೇಳಿದೆ.
ಕನ್ನಡಿಗರ ಉದ್ಯೋಗ ಭದ್ರತೆ ನೀಡುವುದು ರಾಜ್ಯ ಸರ್ಕಾರದ ಬದ್ಧತೆ ಆಗಿದ್ದು, ಕಂಪನಿಗಳು ರಾಜ್ಯದ ಸವಲತ್ತುಗಳನ್ನು ಬಳಸಿಕೊಳ್ಳುತ್ತಿರುವಾಗ ಸ್ಥಳೀಯರಿಗೆ ಉದ್ಯೋಗ ಅವಕಾಶ ನೀಡಬೇಕು ಎಂದು ಸರ್ಕಾರದ ನಿಲುವಿನ ಪರ ಸಚಿವರು ವಾದ ಮಂಡಿಸಿದ್ದರು.
ವಿಧೇಯಕದಲ್ಲಿ ಕೆಲವೊಂದು ದೋಷಗಳು ಇರುವುದು ನಿಜ. ಆದರೆ ಕಂಪನಿಗಳ ಜೊತೆ ಚರ್ಚಿಸಿ ಗೊಂದಲ ಬಗೆಹರಿಸಲು ಸಿದ್ಧ ಎಂದು ಸಚಿವರು ಹೇಳಿಕೆ ನೀಡಿದ್ದರು.