ಆತ್ಮಹತ್ಯೆ ಮಾಡಿಕೊಳ್ಳಲು ನದಿಗೆ ಹಾರಿದ ವೃದ್ದೆಯನ್ನು ಕೆಎಸ್ಸಾರ್ಟಿಸಿ ಚಾಲಕ ಜೀವದ ಹಂಗು ತೊರೆದು ರಕ್ಷಿಸಲು ಹೋರಾಟ ನಡೆಸಿದ ಮಾನವೀಯತೆ ಮೆರೆದ ಘಟನೆ ಹಾವೇರಿಯಲ್ಲಿ ನಡೆದಿದೆ. ಆದರೆ ಚಾಲಕನ ಹೋರಾಟ ನಡುವೆಯೂ ವೃದ್ದೆಯನ್ನು ರಕ್ಷಿಸಲು ಆಗಲಿಲ್ಲ ಎಂಬುದು ವಿಷಾದದ ಸಂಗತಿ.
ಹಾವೇರಿ ಜಿಲ್ಲೆಯಲ್ಲಿ. ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಮಾಸೂರು ಗ್ರಾಮದ ಬಳಿಯಲ್ಲಿ ಉಕ್ಕಿ ಹರಿಯತ್ತಿದ್ದ ಕುಮುದ್ವತಿ ನದಿಗೆ ಹಾರಿದ ಮಜೀದ್ ಸಾಬ್ ಕರ್ತವ್ಯದ ನಡುವೆಯೂ ವೃದ್ದೆ ಉಳಿಸಲು ಹೋರಾಡಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಗುಬ್ಬಿಗೆ ಬಸ್ ಚಲಾಯಿಸಿಕೊಂಡು ಹೋಗುತ್ತಿದ್ದಾಗ ವೃದ್ದೆ ನೀರಿಗೆ ಹಾರಿದ್ದನ್ನು ನೋಡಿದ ಮಜೀದ್ ಸಾಬ್ ಬಸ್ ಅನ್ನು ಕೂಡಲೇ ನಿಲ್ಲಿಸಿ ಹಿಂದು ಮುಂದು ಯೋಚಿಸದೇ ನೀರಿಗೆ ಹಾರಿ ವೃದ್ದೆಯ ರಕ್ಷಣೆಗೆ ಧಾವಿಸಿದ್ದಾರೆ.
ಗಂಟೆಗಟ್ಟಲೆ ಉಕ್ಕಿ ಹರಿಯುತ್ತಿದ್ದ ನದಿಯಲ್ಲಿ ವೃದ್ದೆಗಾಗಿ ತಡಕಾಡಿದ ಚಾಲಕ ಮಜೀದ್ ಸಾಬ್ ಗೆ ಗ್ರಾಮಸ್ಥರು ಹಾಗೂ ಬಸ್ ನಲ್ಲಿದ್ದ ಕೆಲವು ಪ್ರಯಾಣಿಕರು ಸಾಥ್ ನೀಡಿದರು. ಅಷ್ಟರಲ್ಲಿ ಜೀವ ಕಳೆದುಕೊಂಡಿದ್ದ ವೃದ್ದೆಯ ಶವ ಗಿಡಗಂಟಿಗಳ ನಡುವೆ ಪತ್ತೆಯಾಗಿದೆ.
ಇಷ್ಟೆಲ್ಲಾ ಸಾಹಸದ ನಡುವೆಯೂ ವೃದ್ದೆಯನ್ನು ಉಳಿಸಲು ಆಗಲಿಲ್ಲ ಎಂದು ಮಜೀದ್ ಸಾಬ್ ಕಣ್ಣೀರಿಟ್ಟಿದ್ದಾರೆ. ಮಜೀದ್ ಸಾಬ್ ಸಾಹಸಕ್ಕೆ ರಟ್ಟೆಹಳ್ಳಿ ಪೊಲೀಸರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದರು.