ತಿರುಚಿದ ಆಧಾರ್ ಕಾರ್ಡ್ ಬಳಸಿ ದೆಹಲಿಯ ನೂತನ ಸಂಸತ್ ಭವನ ಪ್ರವೇಶಿಸಲು ಯತ್ನಿಸಿದ ಮೂವರನ್ನು ಭದ್ರತಾ ಸಿಬ್ಬಂದಿ ಬಂಧಿಸಿದ್ದಾರೆ.
ಭಾರೀ ಭದ್ರತೆ ಹೊಂದಿರುವ ಸಂಸತ್ ಭವನದೊಳಗೆ ಪ್ರವೇಶಿಸಲು ಯತ್ನಿಸಿದ ಉತ್ತರ ಪ್ರದೇಶ ಮೂಲದ ಕಾರ್ಮಿಕರಾದ ಕಾಸಿಂ, ಮೊನಿಸ್ ಮತ್ತು ಸೊಯೆಬ್ ಅವರನ್ನು ಬಂಧಿಸಲಾಗಿದೆ.
ಮಂಗಳವಾರ ಸಂಸತ್ ಭವನದ ಫ್ಲಾಪ್ ಗೇಟ್ ಬಳಿಯಲ್ಲಿ ಸಂಸತ್ ಭವನ ಪ್ರವೇಶಿಸಲು ಸರತಿ ಸಾಲಿನಲ್ಲಿ ನಿಂತಿದ್ದ ಮೂವರನ್ನು ಸಿಐಎಸ್ ಎಫ್ ಸಿಬ್ಬಂದಿ ಬಂಧಿಸಿದೆ.
ಸಂಸತ್ ಭವನ ಪ್ರವೇಶಿಸಲು ಭದ್ರತಾ ಸಿಬ್ಬಂದಿ ಪರಿಶೀಲನೆ ನಡೆಸಿದಾಗ ಮೂವರು ಆಧಾರ್ ಕಾರ್ಡ್ ನೀಡಿದ್ದಾರೆ. ಆಧಾರ್ ಕಾರ್ಡ್ ಬಗ್ಗೆ ಅನುಮಾನ ಬಂದ ಭದ್ರತಾ ಸಿಬ್ಬಂದಿ ಪರಿಶೀಲನೆಗೆ ಕಳುಹಿಸಿದ್ದಾರೆ. ಆಗ ಅದು ಮಾಹಿತಿಗಳನ್ನು ತಿರುಚಲಾಗಿದೆ ಎಂಬುದು ದೃಢವಾಗುತ್ತಿದ್ದಂತೆ ಮೂವರನ್ನು ವಶಕ್ಕೆ ಪಡೆದಿದ್ದಾರೆ.
ಸಂಸತ್ ಭವನದೊಳಗೆ ನಡೆಯುತ್ತಿರುವ ಕಾಮಗಾರಿ ಕೆಲಸಕ್ಕಾಗಿ ಡೀ ವೀ ಪ್ರಾಜೆಕ್ಟ್ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಂಡಿತ್ತು. ಮೂವರ ವಿರುದ್ಧ ವಂಚನೆ ಹಾಗೂ ದಾಖಲೆ ತಿರುಚಿದ ಆರೋಪದ ಮೇಲೆ ಬಂಧಿಸಿ ದೆಹಲಿ ಪೊಲೀಸರ ವಶಕ್ಕೆ ನೀಡಲಾಗಿದೆ.