ಆನ್ ಲೈನ್ ಗೇಮಿಂಗ್ ರಮ್ಮಿ ಆಟದ ಚಟದಿಂದ ಸಾಲದ ಸುಳಿಗೆ ಸಿಲುಕಿದ ಗಂಡನಿಂದಾಗಿ ಒಂದೇ ಕುಟಂಬದ ಮೂವರು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ನಡೆದಿದೆ.
ಚನ್ನರಾಯಪಟ್ಟಣ ತಾಲ್ಲೂಕಿನ, ಕೆರೆಬೀದಿಯ ನಿವಾಸಿಯಾದ ಶ್ರೀನಿವಾಸ್ (43), ಪತ್ನಿ ಶ್ವೇತಾ (36) ಹಾಗೂ ಪುತ್ರಿ ನಾಗಶ್ರೀ (13) ಮೃತ ದುರ್ದೈವಿಗಳು.
ಶ್ರೀನಿವಾಸ್ ಕಾರು ಚಾಲಕನಾಗಿದ್ದು, ಕೆಲಸ ಬಿಟ್ಟು ಊರಿಗೆ ಮರಳಿದ ನಂತರ ರಮ್ಮಿ ಆಟದ ಚಟಕ್ಕೆ ಬಿದ್ದಿದ್ದ. ಶ್ವೇತಾ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರೆ, ಪುತ್ರಿ ನಾಗಶ್ರೀ 7ನೇ ತರಗತಿ ವಿದ್ಯಾರ್ಥಿನಿಯಾಗಿದ್ದಳು.
ಕೊರೊನಾ ಸಂದರ್ಭದಲ್ಲಿ ಆದಾಯ ಕುಸಿದಿದ್ದರಿಂದ ಶ್ರೀನಿವಾಸ್ ಬೆಂಗಳೂರಿನಲ್ಲಿ ಚಾಲಕನ ಕೆಲಸ ಬಿಟ್ಟು ಊರಿಗೆ ಮರಳಿದ್ದ. ಕೆಲಸಕ್ಕೆ ಹೋಗದೇ ಆನ್‌ಲೈನ್ ರಮ್ಮಿ ಚಟಕ್ಕೆ ಬಿದ್ದಿದ್ದ ಶ್ರೀನಿವಾಸ್, ಸಾಕಷ್ಟು ಸಾಲ ಮಾಡಿಕೊಂಡಿದ್ದ. ಸಾಲ ಮರು ಪಾವತಿಸದ ಕಾರಣ ಸಾಲ ನೀಡಿದವರ ಕಾಟ ಹೆಚ್ಚಾಗಿತ್ತು. ಇದರಿಂದ ಒತ್ತಡಕ್ಕೆ ಸಿಲುಕಿದ್ದ ಎಂದು ತಿಳಿದು ಬಂದಿದೆ.
ಮಂಗಳವಾರ ಮೂವರು ಮನೆಯಿಂದ ಹೋದವರು ವಾಪಾಸ್ ಬಂದಿರಲಿಲ್ಲ. ಆತಂಕಗೊಂಡ ಪೋಷಕರು ಎಲ್ಲೆಡೆ ಹುಡುಕಾಟ ನಡೆಸಿ ಕೊನೆಗೆ ಚನ್ನರಾಯಪಟ್ಟಣ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಬುಧವಾರ ಸಂಜೆ ಬಾಗೂರು ಹೋಬಳಿಯ ಮುದ್ಲಾಪುರ ಸಮೀಪದ ಹೇಮಾವತಿ ನಾಲೆಯಲ್ಲಿ ಶ್ರೀನಿವಾಸ್, ಶ್ವೇತಾ ಶವ ಪತ್ತೆಯಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ಎರಡು ಮೃತದೇಹಗಳನ್ನು ಹೊರತೆಗೆದಿದ್ದು, ಬಾಲಕಿ ನಾಗಶ್ರೀ ಮೃತದೇಹಕ್ಕಾಗಿ ಶೋಧಕಾರ್ಯ ಮುಂದುವರೆದಿದೆ.
ಸ್ಥಳಕ್ಕೆ ಎಸ್ಪಿ ಮಹಮದ್ ಸುಜೀತಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ನುಗ್ಗೇಹಳ್ಳಿ ಪೊಲೀಸ್ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.