ಸತತ ಮಳೆಯಿಂದಾಗಿ ತರಕಾರಿ ಬೆಲೆ ಗಗನಕ್ಕೇರುತ್ತಿರುವ ಹಿನ್ನೆಲೆಯಲ್ಲಿ ಜನರು ತರಕಾರಿ ಖರೀದಿಸುವುದನ್ನೇ ಕಡಿಮೆ ಮಾಡಿದ್ದಾರೆ. ಇದರಿಂದ ಸರಾಸರಿಯಿಂದ ಶೇ.29ರಷ್ಟು ತರಕಾರಿ ಮಾರಾಟ ಕುಸಿದಿದೆ ಎಂದು ಸಮೀಕ್ಷೆ ವರದಿ ಹೇಳಿದೆ.
ಲೋಕಲ್ ಸರ್ಕಲ್ ಸಂಸ್ಥೆ ದೇಶಾದ್ಯಂತ ನಡೆಸಿದ ಸಮೀಕ್ಷೆಯಲ್ಲಿ ಜನರು ತರಕಾರಿ ಖರೀದಿ ಪ್ರಮಾಣದಲ್ಲಿ ಕಡಿತ ಮಾಡಿದ್ದಾರೆ. ಇದಕ್ಕೆ ಕಾರಣ ಬೆಲೆ ಏರಿಕೆ ಎಂದು ತಿಳಿದು ಬಂದಿದೆ.
ಮಾರುಕಟ್ಟೆಯಲ್ಲಿ ಪ್ರಸ್ತುತ ಟೊಮೆಟೊ ದರ ಕೆಜಿಗೆ 75 ರೂ. ಆಗಿದ್ದರೆ, ಈರುಳ್ಳಿ ದರ ಕೆಜಿಗೆ 50 ರೂ.ಗಿಂತ ಹೆಚ್ಚಾಗಿದೆ. ಆಲೂಗಡ್ಡೆ 40 ರೂ. ಆಗಿದೆ. ಕಳೆದ ಕೆಲವು ತಿಂಗಳಿಂದ ಅಡುಗೆಗೆ ಪ್ರತಿದಿನ ಬಳಸುವ ತರಕಾರಿ ಬೆಲೆ ಗಗನಕ್ಕೇರಿದ್ದು ಇಳಿಯುವ ಯಾವುದೇ ಲಕ್ಷಣ ಕಂಡು ಬರುತ್ತಿಲ್ಲ.
14,619 ಮಂದಿಯನ್ನು ಸಮೀಕ್ಷೆಗೆ ಒಳಪಡಿಸಲಾಗಿದ್ದು, ಶೇ.29ರಷ್ಟು ಮಂದಿ ಬಜೆಟ್ ಮಿತಿ ಹಿನ್ನೆಲೆಯಲ್ಲಿ ತರಕಾರಿ ಖರೀದಿಯನ್ನೇ ಕಡಿಮೆ ಮಾಡಿದ್ದಾಗಿ ಹೇಳಿಕೊಂಡಿದ್ದಾರೆ. ಶೇ.42ರಂದು ಬೆಲೆ ಏರಿಕೆಯಾದರೂ ಅಷ್ಟೇ ತರಕಾರಿ ಖರೀದಿಸುತ್ತಿರುವುದಾಗಿ ತಿಳಿಸಿದ್ದಾರೆ. ಶೇ.,29ರಂದು ಮಂದಿ ಮೊದಲಿನಂತೆ ತರಕಾರಿ ಖರೀದಿಸುತ್ತಿದ್ದರೂ ಕಡಿಮೆ ಬೆಲೆ ಎಲ್ಲಿ ಸಿಗುತ್ತದೆ ಎಂದು ಹುಡುಕಿಕೊಂಡು ಹೋಗಿ ತರುತ್ತಿದ್ದಾರಂತೆ.
15,260 ಗ್ರಾಹಕರ ಪೈಕಿ ಶೇ.56ರಷ್ಟು ಮಂದಿ ಪ್ರಕಾರ ಟೊಮೆಟೊ ದರ 75, ಈರುಳ್ಳಿ 50 ಹಾಗೂ ಆಲೂಗಡ್ಡೆ 40 ರೂ. ಇದೆ. ಶೇ.29ರಂದು ಟೊಮೆಟೊವನ್ನು ಕೆಜಿಗೆ 50ರಿಂದ 75 ರೂ.ಗೆ, ಈರುಳ್ಳಿ 40ರಿಂದ 50 ರೂ.ಗೆ, ಆಲೂಗಡ್ಡೆ 30ರಿಂದ 40 ರೂ.ಗೆ ಖರೀದಿಸುತ್ತಿದ್ದಾರಂತೆ. ಶೇ.6ರಷ್ಟು ಮಂದಿ ಮಾತ್ರ ಟೊಮೆಟೊ 50 ರೂ.ಗಿಂತ ಕಡಿಮೆ ಮೊತ್ತಕ್ಕೆ, ಈರುಳ್ಳಿ 40 ಹಾಗೂ ಆಲೂಗಡ್ಡೆ 30ರೂ.ಗಿಂತ ಕಡಿಮೆ ಬೆಲೆಗೆ ಖರೀದಿಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ.