ಹೃತಿಕ್ ರೋಷನ್ ಅಭಿನಯದ ಧೂಮ್ -2 ಚಿತ್ರದಿಂದ ಸ್ಪೂರ್ತಿ ಪಡೆದು ಸಿನಿಮಾ ಮಾದರಿಯಲ್ಲೇ 15 ಕೋಟಿ ರೂ. ಮೌಲ್ಯದ ಚಿನ್ನಾಭರಣ ದೋಚಿದ ಕಳ್ಳ ವಿಚಿತ್ರವಾಗಿ ಸಿಕ್ಕಿಬಿದ್ದ ಘಟನೆ ಮಧ್ಯಪ್ರದೇಶದಲ್ಲಿ ಸಂಭವಿಸಿದೆ.
ರಾಜಧಾನಿ ಭೂಪಾಲ್ ನಲ್ಲಿರುವ ಪುರಾತನ ಕಾಲದ ಚಿನ್ನದ ನಾಣ್ಯ, ಚಿನ್ನಾಭರಣ ಮುಂತಾದ ಅಪರೂಪದ ಹಾಗೂ ಬೆಲೆಬಾಳುವ ವಸ್ತು ಸಂಗ್ರಹಾಲಯದಲ್ಲಿ ಕಳ್ಳತನ ಮಾಡಿ ತಪ್ಪಿಸಿಕೊಳ್ಳುವ ಯತ್ನದಲ್ಲಿ ಕಳ್ಳ ಸಿಕ್ಕಿಬಿದ್ದಿದ್ದಾನೆ.
ವಿನೋದ್ ಯಾದವ್ ಎಂಬ ವೃತ್ತಿಪರ ಕಳ್ಳ ವಸ್ತು ಸಂಗ್ರಾಹಲಯದೊಳಗೆ ಮೂರ್ಚೆ ಹೋದ ಸ್ಥಿತಿಯಲ್ಲಿ ಸಿಕ್ಕಿಬಿದ್ದಿದ್ದಾನೆ. ಕದ್ದು ಬ್ಯಾಗ್ ನಲ್ಲಿ ಇರಿಸಿಕೊಂಡಿದ್ದ 15 ಕೋಟಿ ಮೌಲ್ಯದ ಚಿನ್ನಾಭರಣ ಹಾಗೂ ನಾಣ್ಯಗಳು ಪತ್ತೆಯಾಗಿವೆ.
ಘಟನೆ ವಿವರ
ವಿನೋದ್ ಯಾದವ್ ಭಾನುವಾರ ಟಿಕೆಟ್ ಪಡೆದು ವೀಕ್ಷಕನಂತೆ ವಸ್ತು ಸಂಗ್ರಹಾಲಯ ಪ್ರವೇಶಿಸಿದ್ದಾನೆ. ಅಲ್ಲದೆ ಹೊರಗೆ ಬಾರದೇ ಒಳಗೆ ಅಡಗಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾನೆ.
ರಾತ್ರಿ ಸ್ಟೋರ್ ರೂಮಿನ ಎರಡು ಕೊಠಡಿಗಳ ಬೀಗ ಮುರಿದು ಬ್ಯಾಗ್ ನಲ್ಲಿ ಚಿನ್ನದ ನಾಣ್ಯ ಹಾಗೂ ಆಭರಣಗಳನ್ನು ತುಂಬಿಕೊಂಡಿದ್ದಾನೆ. ವಸ್ತು ಸಂಗ್ರಹಾಲಯದಿಂದ ತಪ್ಪಿಸಿಕೊಳ್ಳುವ ಯತ್ನದಲ್ಲಿ 23 ಅಡಿ ಮೇಲಿಂದ ಬಿದ್ದು ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ.
ಮಾರನೇ ದಿನ ಅಧಿಕಾರಿಗಳು ವಸ್ತು ಸಂಗ್ರಹಾಲಯದ ಬಾಗಿಲು ತೆರದು ನೋಡಿದಾಗ ಅಪರೂಪದ ವಸ್ತುಗಳು ಕಣ್ಮರೆ ಆಗಿರುವುದನ್ನು ಕಂಡು ಆತಂಕಕ್ಕೆ ಒಳಗಾಗಿದ್ದಾರೆ.
ಅಧಿಕಾರಿಗಳು ಕಟ್ಟಡದ ಎಲ್ಲಾ ಕಡೆ ಪರಿಶೀಲಿಸಿದಾಗ ಕಳ್ಳ ವಿನೋದ್ ಪ್ರಜ್ಞೆ ತಪ್ಪಿ ಬಿದ್ದಿರುವುದನ್ನು ಗಮನಿಸಿದ್ದಾರೆ. ಆತನ ಪಕ್ಕದಲ್ಲಿ ಬಿದ್ದಿದ್ದ ಚೀಲದಲ್ಲಿ ಕಳುವಾಗಿದ್ದ ಚಿನ್ನಾಭರಣ ಪತ್ತೆಯಾಗಿದೆ.
ಭೋಪಾಲ್ ಪೊಲೀಸರು ಕಳ್ಳನನ್ನು ಬಂಧಿಸಿದ್ದು, ಸಿನಿಮಾ ಶೈಲಿಯಲ್ಲಿ ಕಳ್ಳತನ ಸಿನಿಮಾಗಷ್ಟೇ ಎಂದು ಪಾಠ ಮಾಡಿದ್ದಾರೆ.
ವಿನೋದ್ ಕಟ್ಟಡದಿಂದ ಹಾರಿ ಪರಾರಿಯಾಗಲು ಯತ್ನಿಸಿ ಕೆಳಗೆ ಬಿದ್ದು ಮೂರ್ಚೆ ಹೋಗಿದ್ದಾನೆ. ಈತನ ಫಿಂಗರ್ ಪ್ರಿಂಟ್ ವಸ್ತುಚಸಂಗ್ರಹಾಲಯದ 50 ಕಡೆ ಸಿಕ್ಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಳುವಾಗಿದ್ದ ಚಿನ್ನದ ನಾಣ್ಯಗಳು 8 ರಿಂದ 10 ಗ್ರಾಂ ತೂಕ ಹೊಂದಿದ್ದು, ಕನಿಷ್ಟ 10 ಕೋಟಿ ರೂ. ಬೆಲೆಬಾಳುತ್ತವೆ. ವಸ್ತು ಸಂಗ್ರಹಾಲಯದಲ್ಲಿ ಒಟ್ಟಾರೆ 50 ಕೋಟಿ ಮೌಲ್ಯದ ಅಪರೂಪದ ವಸ್ತುಗಳಿವೆ ಎಂದು ಪೊಲೀಸರು ವಿವರಿಸಿದ್ದಾರೆ.