ಸದಾ ಪ್ರಯಾಣದಲ್ಲೇ ಇರುವ ಪ್ರಧಾನಿ ಮೋದಿ ಬಾಹ್ಯಕಾಶ ಪ್ರಯಾಣ ಮಾಡುತ್ತಾರಾ? ಅದು ಸಾಧ್ಯವೇ ಎಂಬ ಪ್ರಶ್ನೆ ಇದೀಗ ಜನಸಾಮಾನ್ಯರನ್ನು ಕಾಡುತ್ತಿದೆ. ಇದಕ್ಕೆ ಕಾರಣ ಮೋದಿ ಬಾಹ್ಯಕಾಶ ಪ್ರಯಾಣ ಮಾಡುವ ಬಗ್ಗೆ ಇಸ್ರೊ ಅಧ್ಯಕ್ಷರ ಹೇಳಿಕೆ.
ಹೌದು, ಭಾರತೀಯ ಬಾಹ್ಯಕಾಶ ಸಂಸ್ಥೆ (isro) ಅಧ್ಯಕ್ಷ ಡಾ.ಎಸ್. ಸೋಮನಾಥ್, ಬಾಹ್ಯಕಾಶಕ್ಕೆ ಪ್ರಧಾನಿ ಮೋದಿ ಅವರನ್ನು ಕಳುಹಿಸಲು ಸಾಧ್ಯವಾದರೆ ಅದು ನಮ್ಮ ಹೆಮ್ಮೆಯ ವಿಷಯವಾಗಲಿದೆ ಎಂದಿದ್ದಾರೆ.
ಖಾಸಗಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಸೋಮನಾಥ್ ಈ ವಿಷಯ ತಿಳಿಸಿದರು. ಆದರೆ ಸದ್ಯ ನಮ್ಮ ಪ್ರಯತ್ನ ಗಗನಯಾನದತ್ತ ಇದೆ. ನಾವು ಇಂತಹ ಸಾಧನೆಗೆ ಅರ್ಹರಾಗಿದ್ದು, ಯಶಸ್ಸುಗೊಳಿಸುವತ್ತ ನಾವು ಗಮನ ಹರಿಸಿದ್ದೇವೆ ಎಂದರು.
ಗಗನಯಾನಕ್ಕೆ ಸಾಕಷ್ಟು ಒತ್ತಡಗಳು ಇವೆ. ಈ ವರ್ಷ ಮೂರು ಮಹತ್ವದ ಕಾರ್ಯಾಚರಣೆಗಳು ನಿಗದಿಯಾಗಿವೆ. ಇದರ ನಡುವೆ ಗಗನಯಾನಕ್ಕೆ ಸಮಯ ನಿಗದಿಪಡಿಸುವ ಸವಾಲು ನಮ್ಮ ಮುಂದಿದೆ ಎಂದು ಸೋಮನಾಥ್ ವಿವರಿಸಿದರು.
ಗಗನಯಾನಕ್ಕೆ ಈಗಾಗಲೇ ಭಾರತದ ವಾಯುಪಡೆದ ನಾಲ್ವರನ್ನು ಆಯ್ಕೆ ಮಾಡಲಾಗಿದ್ದು, ಅವರಿಗೆ ತರಬೇತಿ ನೀಡಲಾಗಿದೆ. ತರಬೇತಿ ಕಡಿಮೆ ಅವಧಿಯದ್ದಾಗಿದ್ದರೂ ಸಾಕಷ್ಟು ಸಿದ್ಧತೆಗಳು ತೃಪ್ತಿ ನೀಡಿವೆ ಎಂದು ಅವರು ತಿಳಿಸಿದರು.