ಬೆಂಗಳೂರು:ರಾಜ್ಯದಲ್ಲಿ ಬಾಕಿ ಉಳಿದಿರುವ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿಗಳಿಗೆ 2027ರ ಜನವರಿ ಮೊದಲ ವಾರದಲ್ಲೇ ಚುನಾವಣೆ ನಡೆಸಲು ರಾಜ್ಯ ಸರ್ಕಾರ ಮುಂದಾಗಿದೆ.
ಈ ಸಂಬಂಧ ಮಂಗಳವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ ಕೈಗೊಂಡ ಬೆನ್ನಲ್ಲೇ ಚುನಾವಣಾ ಸಿದ್ಧತೆಗಳಿಗೆ ವೇಗ ನೀಡಿರುವ ಸರ್ಕಾರ, ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿಗಳ ವರ್ಗವಾರು ಮೀಸಲಾತಿ ಅಧಿಸೂಚನೆಯನ್ನು ಪ್ರಕಟಿಸಿದೆ. ರಾಜ್ಯದಲ್ಲಿ ಒಟ್ಟು 1,129 ಜಿಲ್ಲಾ ಪಂಚಾಯಿತಿ ಹಾಗೂ 3,656 ತಾಲೂಕು ಪಂಚಾಯಿತಿ ಸ್ಥಾನಗಳಿಗೆ ವರ್ಗವಾರು ಮೀಸಲಾತಿ ನಿಗದಿಪಡಿಸಲಾಗಿದೆ.
1,129 ಜಿಪಂ ಸ್ಥಾನಗಳಿಗೆ ಮೀಸಲಾತಿ:
ರಾಜ್ಯದ 1,129 ಜಿಲ್ಲಾ ಪಂಚಾಯಿತಿ ಸ್ಥಾನಗಳ ಪೈಕಿ ಪರಿಶಿಷ್ಟ ಜಾತಿಗೆ 225, ಪರಿಶಿಷ್ಟ ಪಂಗಡಕ್ಕೆ 102, ಹಿಂದುಳಿದ ವರ್ಗ ‘ಎ’ಗೆ 183, ಹಿಂದುಳಿದ ವರ್ಗ ‘ಬಿ’ಗೆ 43 ಹಾಗೂ ಸಾಮಾನ್ಯ ವರ್ಗಕ್ಕೆ 576 ಸ್ಥಾನಗಳನ್ನು ಮೀಸಲಿಡಲಾಗಿದೆ.
3,656 ತಾಪಂಸ್ಥಾನಗಳಿಗೂ ಮೀಸಲಾತಿ:
ರಾಜ್ಯದಲ್ಲಿ ಒಟ್ಟು 3,656 ತಾಲೂಕು ಪಂಚಾಯಿತಿ ಸದಸ್ಯ ಸ್ಥಾನಗಳಿದ್ದು, ಈ ಪೈಕಿ ಪರಿಶಿಷ್ಟ ಜಾತಿಗೆ 733, ಪರಿಶಿಷ್ಟ ಪಂಗಡಕ್ಕೆ 394, ಹಿಂದುಳಿದ ವರ್ಗ ‘ಎ’ಗೆ 508, ಹಿಂದುಳಿದ ವರ್ಗ ‘ಬಿ’ಗೆ 111 ಹಾಗೂ ಸಾಮಾನ್ಯ ವರ್ಗಕ್ಕೆ 1,910 ಸ್ಥಾನಗಳನ್ನು ಮೀಸಲಿಡಲಾಗಿದೆ.
ಜ.15ರೊಳಗೆ ಚುನಾವಣೆ:
ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಗಳನ್ನು 2027ರ ಜನವರಿ ಮೊದಲ ವಾರದಲ್ಲೇ, ಗರಿಷ್ಠ ಜನವರಿ 15ರೊಳಗೆ ಪೂರ್ಣಗೊಳಿಸುವ ಉದ್ದೇಶವನ್ನು ಸರ್ಕಾರ ಹೊಂದಿದೆ. ಡಿಸೆಂಬರ್‌ನಲ್ಲಿ ಚುನಾವಣಾ ಪ್ರಕ್ರಿಯೆ ಆರಂಭಿಸಿ, ಜನವರಿಯಲ್ಲಿ ಚುನಾವಣೆ ನಡೆಸಲು ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಗಳ ಬಳಿಕ ಗ್ರಾಮ ಪಂಚಾಯಿತಿ ಚುನಾವಣೆ ನಡೆಸಲು ಸರ್ಕಾರ ಮುಂದಾಗಿದೆ.
ಬ್ಯಾಲೆಟ್ ಪೇಪರ್ ಬಳಕೆ:
ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಈ ಬಾರಿ ಇವಿಎಂ ಬದಲಿಗೆ ಬ್ಯಾಲೆಟ್ ಬಾಕ್ಸ್ ಮೂಲಕ ಮತದಾನ ನಡೆಸಲು ಅವಕಾಶ ಕಲ್ಪಿಸಲಾಗಿದೆ. ಇದಕ್ಕಾಗಿ ಪಂಚಾಯತ್ ರಾಜ್ ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ಹೀಗಾಗಿ ಮುಂಬರುವ ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಗಳಲ್ಲಿ ಇವಿಎಂ ಬದಲಾಗಿ ಬ್ಯಾಲೆಟ್ ಪೇಪರ್ ಬಳಸುವ ಸಾಧ್ಯತೆ ಇದೆ.
ಒಟ್ಟಾರೆ, ಪಂಚಾಯಿತಿ ಚುನಾವಣೆ ಪ್ರಕ್ರಿಯೆ ವೇಗ ಪಡೆದುಕೊಂಡಿದ್ದು, ಡಿಸೆಂಬರ್‌ನಲ್ಲಿ ಅಧಿಸೂಚನೆ ಹೊರಡಿಸಿ ಜನವರಿ ಮೊದಲ ವಾರದಲ್ಲಿ ಚುನಾವಣೆ ನಡೆಸಲು ಸರ್ಕಾರ ಸಿದ್ಧತೆ ನಡೆಸುತ್ತಿದೆ. ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳಲ್ಲಿ ಟಿಕೆಟ್ ಆಕಾಂಕ್ಷಿಗಳ ಲೆಕ್ಕಾಚಾರವೂ ಗರಿಗೆದರಲಿದೆ.
ಜಿಲ್ಲಾ ಪಂಚಾಯಿತಿ ಸ್ಥಾನಗಳ ವಿವರ:
ಪರಿಶಿಷ್ಟ ಜಾತಿ: 225 ಸ್ಥಾನಗಳು — 121 ಮಹಿಳೆಯರಿಗೆ
ಪರಿಶಿಷ್ಟ ಪಂಗಡ: 102 ಸ್ಥಾನಗಳು — 59 ಮಹಿಳೆಯರಿಗೆ
ಹಿಂದುಳಿದ ವರ್ಗ ‘ಎ’: 183 ಸ್ಥಾನಗಳು — 98 ಮಹಿಳೆಯರಿಗೆ
ಹಿಂದುಳಿದ ವರ್ಗ ‘ಬಿ’: 43 ಸ್ಥಾನಗಳು — 25 ಮಹಿಳೆಯರಿಗೆ
ಸಾಮಾನ್ಯ ವರ್ಗ: 576 ಸ್ಥಾನಗಳು — 268 ಮಹಿಳೆಯರಿಗೆ



