ಬೆಂಗಳೂರು:ಕೆಂಗೇರಿ ಸಮೀಪದ ರಾಜರಾಜೇಶ್ವರಿ ವೈದ್ಯಕೀಯ ಕಾಲೇಜಿನ ಹಿಂಭಾಗದಲ್ಲಿ ಸೋಮವಾರ ಮುಂಜಾನೆ ವಾಯುವಿಹಾರಕ್ಕೆ ತೆರಳಿದ್ದ ವ್ಯಕ್ತಿಯೊಬ್ಬರು ಕಾಡಾನೆ ದಾಳಿ ಸಿಲುಕಿ ಒದ್ದಾಡಿ ಮೃತಪಟ್ಟಿದ್ದಾರೆ.
ಅಂಚೆಪಾಳ್ಯ ಗ್ರಾಮದ ಕೂಲಿ ಕಾರ್ಮಿಕ ನಾಗರಾಜ್ (60) ಮೃತಪಟ್ಟ ದುರ್ದೈವಿಯಾಗಿದ್ದಾರೆ.
ಸೂರು ರಸ್ತೆಯ ಅಂಚೆಪಾಳ್ಯ ಗ್ರಾಮದ ನಾಗರಾಜ್ ಅವರು ಎಂದಿನಂತೆ ಬೆಳಗಿನ ಜಾವ ಸುಮಾರು 5 ಗಂಟೆಗೆ ವಾಯುವಿಹಾರಕ್ಕೆ ತೆರಳಿದ್ದಾಗ ಈ ವೇಳೆ ಆರ್.ಆರ್. ವೈದ್ಯಕೀಯ ಕಾಲೇಜು ಹಿಂಭಾಗದಲ್ಲಿ ವಾಯುವಿಹಾರ ಮಾಡುತ್ತಿದ್ದಾಗ ಹಿಂದಿನಿಂದ ಏಕಾಏಕಿ ಬಂದ ಕಾಡಾನೆ ದಾಳಿ ನಡೆಸಿದೆ.
ಆನೆಯಿಂದ ತಪ್ಪಿಸಿಕೊಳ್ಳಲು ನಾಗರಾಜ್ ಅವರು ಯತ್ನಿಸಿದರಾದರೂ ಸಾಧ್ಯವಾಗದೆ ಗಂಭೀರವಾಗಿ ಗಾಯಗೊಂಡಿದ್ದಾರೆ. ಮಾರ್ಗದಲ್ಲಿ ತೆರಳುತ್ತಿದ್ದವರು ಘಟನೆ ಗಮನಿಸಿ ತಕ್ಷಣ ಅವರನ್ನು ರಾಜರಾಜೇಶ್ವರಿ ಆಸ್ಪತ್ರೆಗೆ ದಾಖಲಿಸಿದರಾದರೂ ಚಿಕಿತ್ಸೆ ಫಲಕಾರಿಯಾಗದೆ ನಾಗರಾಜ್ ಮೃತಪಟ್ಟಿದ್ದಾರೆ.
ಸುದ್ದಿ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಘಟನಾ ಸ್ಥಳದಲ್ಲಿ ಎರಡು ಕಾಂಪೌಂಡ್‌ಗಳು ಕೂಡ ಉರುಳಿ ಬಿದ್ದಿರುವುದು ಕಂಡುಬಂದಿದೆ.
ಕಾಡಾನೆ ಬಂದಿದ್ದೇಗೆ?
ಜನವಸತಿ ಪ್ರದೇಶದಲ್ಲಿ ಕಾಡಾನೆ ಪ್ರತ್ಯಕ್ಷವಾಗಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಕಾಡಾನೆ ಜನವಸತಿ ಪ್ರದೇಶಕ್ಕೆ ಹೇಗೆ ಬಂದಿತು ಎಂಬುದು ಸದ್ಯ ನಿಗೂಢವಾಗಿದೆ. ಘಟನೆ ಹಿನ್ನೆಲೆಯಲ್ಲಿ ಸ್ಥಳೀಯರಲ್ಲಿ ಆತಂಕ ಹೆಚ್ಚಾಗಿದೆ.
ಇತ್ತೀಚೆಗೆ ನಗರದ ಬನಶಂಕರಿ 6ನೇ ಹಂತ ಹಾಗೂ ಕರಿಯಣ್ಣಪಾಳ್ಯ ಸಮೀಪ ಚಿರತೆ ಕಾಣಿಸಿಕೊಂಡು ಸ್ಥಳೀಯರಲ್ಲಿ ಭೀತಿ ಮೂಡಿಸಿತ್ತು. ಚಿರತೆ ಓಡಾಟದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದ ಘಟನೆ ಮಾಸುವ ಮುನ್ನವೇ ಕಾಡಾನೆ ಪ್ರತ್ಯಕ್ಷವಾಗಿ ವ್ಯಕ್ತಿಯೊಬ್ಬರ ಸಾವಿಗೆ ಕಾರಣವಾಗಿರುವುದು ಜನರಲ್ಲಿ ಮತ್ತಷ್ಟು ಆತಂಕ ಮೂಡಿಸಿದೆ.



