ನವದೆಹಲಿ: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಸಂಬಂಧಿತ ಎಲ್ಲ ಆದೇಶಗಳನ್ನು ಸಂಸ್ಥೆಯ ಮೂವರೂ ಸದಸ್ಯರ ಸರ್ವಾನುಮತದಿಂದಲೇ ಮಾಡಲಾಗಿತ್ತು ಎಂದು ಭಾರತ ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್, ಎಸ್‌ಐಆರ್ ಸಂಬಂಧಿತ ನಿರ್ಧಾರಗಳನ್ನು ಏಕಪಕ್ಷೀಯವಾಗಿ ಕೈಗೊಂಡಿದ್ದಾರೆ ಎಂದು ಇಬ್ಬರು ಚುನಾವಣಾ ಆಯುಕ್ತರು ಆಕ್ಷೇಪ ವ್ಯಕ್ತಪಡಿಸಿದ ದ್ದು ಭಾರೀ ವಿವಾದಕ್ಕೆ ಕಾರಣವಾಗಿತ್ತು.
ಆಯೋಗದ ಆಯುಕ್ತರ ಭಿನ್ನಾಭಿಪ್ರಾಯದ ನಂತರ ಶನಿವಾರ ಮೊದಲ ಬಾರಿ ಮುಖ್ಯ ಚುನಾವಣಾಧಿಕಾರಿ ನೇತೃತ್ವದಲ್ಲಿ ಆಯುಕ್ತರ ಸಭೆ ನಡೆದಿದ್ದು, ಸಭೆಯ ನಂತರ ವಿವಾದಗಳ ಕುರಿತು ಸ್ಪಷ್ಟನೆ ನೀಡಿದೆ.
ಎಸ್‌ಐಆರ್‌ಗೆ ಸಂಬಂಧಿಸಿದಂತೆ ದೇಶಾದ್ಯಂತ ಹೊರಡಿಸಲಾಗಿರುವ ಆದೇಶಗಳಿಗೆ ಮೂವರೂ ಆಯುಕ್ತರ ಅನುಮೋದನೆ ಇತ್ತು. ಹೊಸ ಮತದಾರರ ನೋಂದಣಿಗೆ ಬಳಸಲಾಗುವ ‘ನಮೂನೆ 6’ಕ್ಕೆ ಸಂಬಂಧಿಸಿದ ಬದಲಾವಣೆಯನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಚುನಾವಣಾ ಆಯುಕ್ತರಾದ ಸಂಧು ಮತ್ತು ಜೋಶಿ ಅವರು ಸಂಪುಟ ಕಾರ್ಯದರ್ಶಿಗೆ ಬರೆದ ಪತ್ರಗಳು, ಆಯೋಗದ ಅಥವಾ ಐಟಿ ವಿಭಾಗದ ಯಾವುದೇ ನೀತಿ ನಿರ್ಧಾರಕ್ಕೆ ಸಂಬಂಧಿಸಿರಲಿಲ್ಲ ಎಂದು ಮೂವರೂ ಸದಸ್ಯರ ಪೂರ್ಣ ಆಯೋಗದ ಅನುಮೋದನೆಯೊಂದಿಗೆ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಕಾಮಗಾರಿ ಸಂಬಂಧಿತ ಆದೇಶಗಳ ಬಗ್ಗೆ ಚುನಾವಣಾ ಆಯುಕ್ತರಿಂದ ನಿರ್ದೇಶನ ಬಂದ ಬಳಿಕ ಅವುಗಳನ್ನು ತಡೆಹಿಡಯಲಾಯಿತು ಎಂದು ಪ್ರಕಟಣೆ ತಿಳಿಸಿದೆ.
2025ರ ಜೂನ್ 24ರಂದು ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಎಸ್‌ಐಆರ್ ಕುರಿತು ನೀಡಲಾದ ಆದೇಶವು, ಮೂವರು ಚುನಾವಣಾ ಆಯುಕ್ತರಿಂದ ಸರ್ವಾನುಮತದಿಂದ ಅನುಮೋದನೆಗೊಂಡಿತ್ತು ಎಂದೂ ತಿಳಿಸಿದೆ.



