ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಹೂಲಿಕಟ್ಟಿ ಗ್ರಾಮದಲ್ಲಿ 11 ಶಾಲಾ ಮಕ್ಕಳು ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡ ಪ್ರಕರಣದಲ್ಲಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
15 ದಿನಗಳ ಹಿಂದೆ ಮಧ್ಯಾಹ್ನದ ಬಿಸಿಯೂಟ ಮಾಡುತ್ತಿದ್ದ ಶಾಲಾ ಮಕ್ಕಳು ಕಲುಷಿತ ನೀರು ಕುಡಿದಿದ್ದರಿಂದ 11 ಮಂದಿ ಅಸ್ವಸ್ಥಗೊಂಡಿದ್ದರು. ಈ ಪ್ರಕರಣದಲ್ಲಿ ಶ್ರೀರಾಮ ಸೇನೆಯ ಸವದತ್ತಿ ತಾಲೂಕಾಧ್ಯಕ್ಷ ಸಾಗರ ಪಾಟೀಲ, ಕೃಷ್ಣಾ ಮಾದರ ಹಾಗೂ ಸಾಗರ ಪಾಟೀಲ ಸಂಬಂಧಿ ನಾಗನಗೌಡ ಪಾಟೀಲ ಅವರನ್ನು ಸವದತ್ತಿ ಪೊಲೀಸರು ಬಂಧಿಸಿದ್ದಾರೆ.
ಬೆಳಗಾವಿ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅದೇ ಗ್ರಾಮದ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ ಮುಸ್ಲಿಂ ಎಂಬ ಕಾರಣಕ್ಕೆ ಅವರನ್ನು ಶಾಲೆಯಿಂದ ಓಡಿಸಲು ಮೂವರು ಶಾಲಾ ಮಕ್ಕಳಿಗೆ ವಿಷ ಪ್ರಾಶನ ಮಾಡಿದ್ದಾರೆ ಎಂದರು.
ವಿಷ ಮಿಶ್ರಿತ ನೀರು ಸೇವಿಸಿ ಮಕ್ಕಳು ಮರಣ ಹೊಂದಿದರೆ ಮುಖ್ಯ ಶಿಕ್ಷಕನನ್ನು ಹೊಣೆ ಮಾಡಿ ವರ್ಗಾಯಿಸಬಹುದು ಎಂದು ಅದೆ ಗ್ರಾಮದ ಸಾಗರ ಪಾಟೀಲ, ಕೃಷ್ಣಾ ಮಾದರ, ನಾಗನಗೌಡ ಪಾಟೀಲ್ ಸಂಚು ರೂಪಿಸಿದ್ದರು ಎಂದು ಅವರು ಹೇಳಿದರು.
ಸಾಗರ ಪಾಟೀಲ ಶ್ರೀರಾಮ ಸೇನೆಯ ಸವದತ್ತಿ ತಾಲೂಕಾಧ್ಯಕ್ಷ. ವಿಷ ಬೆರೆಸಲು ಕೃಷ್ಣಾ ಮಾದರ ಎಂಬಾತನಿಗೆ ಬ್ಲ್ಯಾಕ್‌ಮೇಲ್ ಮಾಡಿದ್ದ. ಕೃಷ್ಣಾ ಮಾದರ ಅನ್ಯಜಾತಿಯ ಹುಡುಗಿಯನ್ನು ಪ್ರೀತಿಸುತ್ತಿರುವ ಸಂಗತಿ ತಿಳಿದಿದ್ದ.
ನಾನು ಹೇಳುವ ಕೆಲಸ ಮಾಡದಿದ್ರೆ ನಿನ್ನ ಪ್ರೀತಿಯ ವಿಷಯ ಬಹಿರಂಗ ಪಡಿಸುವುದಾಗಿ ಬ್ಲ್ಯಾಕ್‌ಮೇಲ್ ಮಾಡಿದ್ದಾನೆ. ಇದಕ್ಕೆ ಬೆದರಿ ನೀರಿನಲ್ಲಿ ವಿಷ ಸೇರಿಸಲು ಕೃಷ್ಣಾ ಮಾದರ ಒಪ್ಪಿಕೊಂಡಿದ್ದಾನೆ. ಆಗ ಸಾಗರ ಸಂಬಂಧಿ ನಾಗನಗೌಡ ಜೊತೆಗೆ ಮುನವಳ್ಳಿಗೆ ಹೋಗಿ ಕೃಷ್ಣಾ ಕೀಟನಾಶಕ ತಂದಿದ್ದಾನೆ. ಬಳಿಕ ಕೃತ್ಯಕ್ಕೆ ಅದೇ ಶಾಲೆಯ ಅಮಾಯಕ ಬಾಲಕನನ್ನು ಬಳಸಿ ಹಣ ನೀಡಿ ಕೃತ್ಯಕ್ಕೆ ಪ್ರಚೋದನೆ ನೀಡಿದ್ದಾರೆ. ನೀರಿನಲ್ಲಿ ವಿಷ ಸೇರಿಸಿ ನೀಚ ಕೃತ್ಯ ಎಸಗಿದ್ದ ಮೂವರು ಯುವಕರನ್ನು ಬಂಧಿಸಿ ಪೊಲೀಸರು ಜೈಲಿಗಟ್ಟಿದ್ದಾರೆ



