ಮೈಸೂರು: ಕೇರಳಂನ ವಯನಾಡು ಹಾಗೂ ಕೊಡಗಿನಲ್ಲಿ ಭಾರಿ ಮಳೆ ಸುರಿಯುತ್ತಿರುವುದರಿಂದ ಕೆಆರ್ಎಸ್ ಜಲಾಶಯದ ನೀರಿನ ಮಟ್ಟ 100 ಅಡಿ ದಾಟಿದೆ. ಈ ಮೂಲಕ ಮೈಸೂರು ಭಾಗದ ಜನರು ನಿಟ್ಟುಸಿರುಬಿಡುವಂತಾಗಿದೆ.
ಕಾವೇರಿ ಜಲನಯನ ಪ್ರದೇಶದ ಮೂರು ಜಲಾಶಯಗಳು ಭರ್ತಿಯಾಗಿದ್ದು, ಇದೇ ರೀತಿ ಕೆಲವು ದಿನಗಳ ಕಾಲ ಮಳೆಯಾದರೆ ಶೀಘ್ರದಲ್ಲೇ ಕೆಆರ್ ಎಸ್ ಭರ್ತಿಯಾಗಲಿದೆ.
ಮತ್ತೊಂದೆಡೆ ಕಬಿನಿ ಜಲಾಶಯ ಭರ್ತಿಯಾಗಿರುವುದರಿಂದ ಅಧಿಕ ನೀರನ್ನು ನದಿಗೆ ಹರಿಸಲಾಗುತ್ತಿದ್ದು, ನದಿ ಪಾತ್ರದ ಜನರಿಗೆ ಪ್ರವಾಹದ ಎಚ್ಚರಿಕೆ ನೀಡಲಾಗಿದೆ.
ಜುಲೈ ತಿಂಗಳ ಕೊನೆಯಲ್ಲಿ ಕೇರಳದ ವಯನಾಡು ಮತ್ತು ಕೊಡಗಿನಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದ ಕಬಿನಿ, ಕೆಆರ್ಎಸ್ ಮತ್ತು ಹಾರಂಗಿ ಜಲಾಶಯಗಳಿಗೆ ನೀರಿನ ಹರಿವು ಹೆಚ್ಚಾಗಿದೆ. 10 ದಿನಗಳ ಹಿಂದೆ ಕೆಆರ್ಎಸ್ ಡ್ಯಾಂನಲ್ಲಿ 82 ಅಡಿ ಇದ್ದ ಕೆಲವೇ ದಿನಗಳಲ್ಲಿ 100 ಅಡಿ ದಾಟಿದೆ.
ಕೊಡಗಿನ ಹಾರಂಗಿ ಜಲಾಶಯ ಸಂಪೂರ್ಣ ಭರ್ತಿಯಾಗಿದ್ದು, 12 ಸಾವಿರಕ್ಕೂ ಹೆಚ್ಚು ನೀರನ್ನು ಹೊರ ಬಿಡಲಾಗುತ್ತಿದೆ. ಕೆಆರ್ಎಸ್ ಜಲಾಶಯದ ಗರಿಷ್ಠ ಮಟ್ಟ 124.80 ಆಗಿದ್ದು. ಸೋಮವಾರ ಜಲಾಶಯದ ನೀರಿನ ಮಟ್ಟ 100 ಅಡಿ ದಾಟಿದೆ. ಹೀಗೆ ಮಳೆಯಾದರೆ ಇನ್ನು 15 ದಿನಗಳಲ್ಲಿ ಕೆಆರ್ಎಸ್ ಜಲಾಶಯ ಭರ್ತಿಯಾಗಲಿದೆ ಎಂದು ನಿರೀಕ್ಷಿಸಲಾಗಿದೆ.
ಕಬಿನಿ ಜಲಾಶಯದಿಂದ 27,000 ಕ್ಯೂಸೆಕ್ಗಿಂತ ಹೆಚ್ಚಿನ ನೀರನ್ನು ನದಿಗೆ ಬಿಡಲಾಗುತ್ತಿದ್ದು, ಇದರ ಪರಿಣಾಮ ಕಬಿನಿ ಜಲಾಶಯದ ಮುಂಭಾಗದ ಸೇತುವೆ ಮುಳುಗಡೆಯಾಗಿದೆ. ಇದರಿಂದ ಹ್ಯಾಂಡ್ ಪೋಸ್ಟ್, ಎನ್.ಬೇಗೂರು ಮುಖ್ಯ ರಸ್ತೆ, ಬಿದರಹಳ್ಳಿ, ಭೀಮನಕೊಲ್ಲಿಯ ಶ್ರೀ ಮಾದೇಶ್ವರ ದೇವಸ್ಥಾನಕ್ಕೆ ರಸ್ತೆ ಕಲ್ಪಿಸುವ ಮುಖ್ಯ ರಸ್ತೆ ಸೇರಿದಂತೆ ಸುಮಾರು 25 ಗ್ರಾಮಗಳಿಗೆ ಸಂಪೂರ್ಣ ಸಂಪರ್ಕ ಕಡಿತಗೊಂಡಿದೆ.
ಇದರಿಂದ ಕಬಿನಿ ಜಲಾಶಯದ ಕಾರ್ಯಪಾಲಕ ಇಂಜಿನಿಯರ್ ರಂಗಯ್ಯ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಹೆಚ್.ಡಿ.ಕೋಟೆ ತಾಲೂಕಿನ ಬೀಚನಹಳ್ಳಿ ಬಳಿ ಇರುವ ಕಬಿನಿ ಜಲಾಶಯದಿಂದ ಕಪಿಲಾ ನದಿಗೆ ಹೆಚ್ಚಿನ ನೀರನ್ನು ಬಿಡಲಾಗಿದ್ದು, ಜನರು ನದಿ ಪಾತ್ರಕ್ಕೆ ಹೋಗದಂತೆ ಹಾಗೂ ಜಾನುವಾರುಗಳನ್ನು ನದಿ ಪಾತ್ರಕ್ಕೆ ಬಿಡದಂತೆ ಮನವಿ ಮಾಡಿದ್ದಾರೆ.



