Monday, June 1, 2026
Google search engine
Homeರಾಜ್ಯರಾಜ್ಯದಲ್ಲಿ ವಾಡಿಕೆಗಿಂತ ಶೇ.4ರಷ್ಟು ಅಧಿಕ ಮಳೆ, ಶೇ.98ರಷ್ಟು ಬಿತ್ತನೆ: ಸಿಎಂ ಸಿದ್ದರಾಮಯ್ಯ

ರಾಜ್ಯದಲ್ಲಿ ವಾಡಿಕೆಗಿಂತ ಶೇ.4ರಷ್ಟು ಅಧಿಕ ಮಳೆ, ಶೇ.98ರಷ್ಟು ಬಿತ್ತನೆ: ಸಿಎಂ ಸಿದ್ದರಾಮಯ್ಯ

ರಾಜ್ಯದಲ್ಲಿ ಮುಂಗಾರು ಹಂಗಾಮಿನಲ್ಲಿ ಜೂನ್ 1ರಿಂದ ಸೆಪ್ಟಂಬರ್ ಮೊದಲ ವಾರದವರೆಗೆ ವಾಡಿಕೆಗಿಂತ ಶೇ.4ರಷ್ಟು ಹೆಚ್ಚು ಮಳೆಯಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ರಾಜ್ಯದಲ್ಲಿ ಅತಿವೃಷ್ಟಿಯಿಂದ ಉಂಟಾಗಿರುವ ಹಾನಿ ಹಾಗೂ ಪರಿಹಾರ ಕ್ರಮಗಳ ಕುರಿತು ಬೆಂಗಳೂರಿನಲ್ಲಿ ಸೋಮವಾರ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ರಾಜ್ಯದಲ್ಲಿ ಮುಂಗಾರು ಹಂಗಾಮಿನಲ್ಲಿ ಜೂನ್ 1ರಿಂದ ಸೆಪ್ಟಂಬರ್ ಮೊದಲ ವಾರದವರೆಗೆ ವಾಡಿಕೆಗಿಂತ ಶೇ.4ರಷ್ಟು ಹೆಚ್ಚು ಮಳೆಯಾಗಿದೆ. ಈ ಅವಧಿಯಲ್ಲಿ ವಾಡಿಕೆ ಮಳೆ 721ಮಿ.ಮೀ ಇದ್ದು, 753 ಮಿ.ಮೀ ಮಳೆ ದಾಖಲಾಗಿದೆ. ಕಳೆದ ವರ್ಷ ಶೇ.23ರಷ್ಟು ಹೆಚ್ಚುವರಿ ಮಳೆ ದಾಖಲಾಗಿತ್ತು ಎಂದು ಅವರು ಹೇಳಿದರು.

ಮಳೆಗಾದಲ್ಲಿ ಚಾಮರಾಜನಗರದಲ್ಲಿ ಶೇ.24ರಷ್ಟು ಕಡಿಮೆ ಮಳೆಯಾಗಿದೆ. ವಿಜಯಪುರ, ಗದಗ, ಬಾಗಲಕೋಟೆ, ದಾವಣಗೆರೆ, ತುಮಕೂರು ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಶೇ.20ಕ್ಕಿಂತ ಹೆಚ್ಚು ಮಳೆ ದಾಖಲಾಗಿದೆ ಎಂದು ಅವರು ವಿವರಿಸಿದರು.

ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ನೀರಿನ ಮಟ್ಟ ಕಳೆದ ವರ್ಷಕ್ಕೆ ಹೋಲಿಸಿದರೆ ಈಗ ಸ್ವಲ್ಪ  ಕಡಿಮೆಯಿದೆ. ಪ್ರಮುಖ ಜಲಾಶಯಗಳ ಗರಿಷ್ಟ ಸಾಮರ್ಥ್ಯ 895.62 ಟಿಎಂಸಿ ಇದ್ದು, ಪ್ರಸ್ತುತ 840.52 ಟಿಎಂಸಿ ಸಂಗ್ರಹವಿದೆ. ಕಳೆದ ವರ್ಷ ಈ ಅವಧಿಯಲ್ಲಿ 856.17 ಟಿಎಂಸಿ ಸಂಗ್ರಹ ಇತ್ತು ಎಂದು ಸಿಎಂ ನುಡಿದರು.

ಮಳೆ ಹಾನಿಯಿಂದ ಹಾನಿಗೀಡಾಗಿರುವ ಬೆಳೆ, ಮನೆಗಳಿಗೆ ಸೂಕ್ತ ಪರಿಹಾರವನ್ನು ತಕ್ಷಣ ಒದಗಿಸಲು ಕ್ರಮ ಕೈಗೊಳ್ಳಬೇಕು. ಮುಂಗಾರು ಹಂಗಾಮಿನಲ್ಲಿ ಶೇ.98 ಬಿತ್ತನೆ ಪೂರ್ಣಗೊಂಡಿದೆ. ಬಿತ್ತನೆ ಗುರಿ 82.50 ಲಕ್ಷ ಹೆಕ್ಟೇರ್ ಇದ್ದು, 80.76 ಲಕ್ಷ ಹೆಕ್ಟೇರ್ ವಾಸ್ತವಿಕ ಬಿತ್ತನೆಯಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.

ತುಂಗಾಭದ್ರಾ ಅಣೆಕಟ್ಟೆಯ 32 ಕ್ರೆಸ್ಟ್ ಗೇಟ್ ಬದಲಾವಣೆ

ತುಂಗಾಭದ್ರಾ ಅಣೆಕಟ್ಟಿನ 32 ಕ್ರೆಸ್ಟ್ ಗೇಟ್ ಬದಲಾವಣೆಗೆ ಟೆಂಡರ್ ಆಗಿದ್ದು, 8 ಕ್ರೆಸ್ಟ್ ಗೇಟ್ಗಳು ಅಳವಡಿಕೆಗೆ ಸಿದ್ಧವಿದೆ. ಕ್ರೆಸ್ಟ್ಗೇಟು ಬದಲಾವಣೆ ಸೇರಿದಂತೆ ಅಣೆಕಟ್ಟಿನ ಮೂಲಸೌಕರ್ಯಗಳ ಅಭಿವೃದ್ಧಿಪಡಿಸುವ ಕಾರ್ಯ ತುಂಗಾಭದ್ರಾ ಮಂಡಳಿಯ ವ್ಯಾಪ್ತಿಗೆ ಬರುತ್ತದೆ ಎಂದು ಅವರು ಹೇಳಿದರು.

ತುಂಗಾ ಭದ್ರಾ ಅಣೆಕಟ್ಟಿನಲ್ಲಿ ಪ್ರಥಮ ಬೆಳೆಗೆ ಮಾತ್ರ ನೀರು ಲಭ್ಯವಿದ್ದು, ಎರಡನೇ ಬೆಳೆಗೆ ನೀರು ಹರಿಸಲು ಪ್ರಸ್ತುತ ಸನ್ನಿವೇಶದಲ್ಲಿ ಸಾಧ್ಯವಿಲ್ಲ. ನೀರು ಹರಿಸುವ ಪೂರ್ವದಲ್ಲೇ ಎಲ್ಲಾ ಸಣ್ಣಪುಟ್ಟ ದುರಸ್ತಿ ಕಾರ್ಯಗಳನ್ನು ಪೂರ್ಣಗೊಳಿಸಬೇಕು ಎಂದು ಮುಖ್ಯಮಂತ್ರಿ ಅವರು ಸೂಚನೆ ನೀಡಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments