ಉಗ್ರರ ವಿರುದ್ಧದ ಕಾರ್ಯಾಚರಣೆ ವೇಳೆ ನಾಲ್ವರು ಯೋಧರು ಹುತಾತ್ಮರಾದ ಘಟನೆ ಜಮ್ಮು ಕಾಶ್ಮೀರದ ದೋಡಾ ಜಿಲ್ಲೆಯಲ್ಲಿ ನಡೆದಿದೆ.
ಭಾರತೀಯ ಸೇನೆ ಮತ್ತು ಜಮ್ಮು ಕಾಶ್ಮೀರದ ಪೊಲೀಸರು ನಿಖರ ಮಾಹಿತಿ ಮೇರೆಗೆ ದೋಡಾ ಮತ್ತು ದೇಸಾ ಪ್ರದೇಶಗಳಲ್ಲಿ ಜಂಟಿಯಾಗಿ ನಡೆಸಿದ ಕಾರ್ಯಾಚರಣೆ ವೇಳೆ ಯೋಧರು ಹುತಾತ್ಮರಾಗಿದ್ದಾರೆ.
ಸೋಮವಾರ ರಾತ್ರಿ 9 ಗಂಟೆಗೆ ಕಾರ್ಯಾಚರಣೆ ನಡೆಸಿದಾಗ ಉಗ್ರರ ವಿರುದ್ಧ ಗುಂಡಿನ ಚಕಮಕಿ ನಡೆದಿದ್ದು, ಈ ವೇಳೆ ಒಬ್ಬ ಅಧಿಕಾರಿ ಸೇರಿದಂತೆ ನಾಲ್ವರು ಯೋಧರು ಹುತಾತ್ಮರಾಗಿದ್ದಾರೆ ಎಂದು ಭಾರತೀಯ ಸೇನೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿದೆ.
ಇತ್ತೀಚೆಗೆ ಜಮ್ಮು ಕಾಶ್ಮೀರದಲ್ಲಿ ಉಗ್ರರ ಉಪಟಳ ಹೆಚ್ಚಾಗಿದ್ದು, ಕೆಲವು ದಿನಗಳ ಹಿಂದೆಯಷ್ಟೇ ಉಗ್ರರ ದಾಳಿ ಹಿನ್ನೆಲೆಯಲ್ಲಿ 5 ಯೋಧರು ಹುತಾತ್ಮರಾಗಿದ್ದರು.