ಪ್ರಧಾನಿ ನರೇಂದ್ರ ಮೋದಿ ರಷ್ಯಾ ಭೇಟಿ ಬೆನ್ನಲ್ಲೇ ಉಕ್ರೇನ್ ಮೇಲೆ ರಷ್ಯಾ ಸೇನೆ ದಾಳಿ ನಡೆಸಿದ್ದು, ಮಕ್ಕಳು ಸೇರಿದಂತೆ 41 ಮಂದಿ ಮೃತಪಟ್ಟಿದ್ದಾರೆ.
ಉಕ್ರೇನ್ ರಾಜಧಾನಿ ಕೀವ್ ನಲ್ಲಿರುವ ಮಕ್ಕಳ ಆಸ್ಪತ್ರೆಯನ್ನು ಗುರಿಯಾಗಿಸಿ ರಷ್ಯಾ ಸೇನೆ ಕ್ಷಿಪಣಿಗಳ ದಾಳಿ ನಡೆಸಿದೆ. ಇದರಿಂದ ಮಕ್ಕಳು ಸೇರಿದಂತೆ 41 ಮಂದಿ ಅಸುನೀಗಿದ್ದಾರೆ. ಇದು ಇತ್ತೀಚೆಗೆ ಉಕ್ರೇನ್ ಮೇಲೆ ನಡೆಸಿದ ಅತ್ಯಂತ ಭೀಕರ ವೈಮಾನಿಕ ದಾಳಿಯಾಗಿದೆ ಎಂದು ಹೇಳಿಕೊಂಡಿದೆ.
ಸೋಮವಾರ ತಡರಾತ್ರಿ ವಿಮಾನದ ಮೂಲಕ ಕ್ಷಿಪಣಿಗಳ ದಾಳಿ ನಡೆಸಲಾಗಿದೆ. ಆಸ್ಪತ್ರೆ ಮತ್ತು ಆವರಣದಲ್ಲಿ ಮಕ್ಕಳ ಜೊತೆಗಿದ್ದ ಪೋಷಕರು ದಾಳಿಗೆ ಬಲಿಯಾಗಿದ್ದಾರೆ. ದಾಳಿಯ ತೀವ್ರತೆಗೆ ಆಸ್ಪತ್ರೆಯ ಒಂದು ಭಾಗ ಕುಸಿದುಬಿದ್ದಿದ್ದು, ಕಿಟಕಿ-ಬಾಗಿಲುಗಳು ಧ್ವಂಸವಾಗಿವೆ.
ದಾಳಿಯಲ್ಲಿ 170ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, 37 ಮಂದಿ ಮೃತಪಟ್ಟಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಅಧಿಕೃತ ಮಾಹಿತಿ ಪ್ರಕಾರ ಸಾವಿನ ಸಂಖ್ಯೆ 41 ಆಗಿದೆ.
ದಾಳಿಯಿಂದ ಹೊಗೆ, ಧೂಳಿನಿಂದ ಮಕ್ಕಳನ್ನು ರಕ್ಷಿಸಿಕೊಳ್ಳಲು ಬದುಕುಳಿದ ಪೋಷಕರು ಪರದಾಡುವಂತಾಯಿತು ಎಂದು ಸ್ಥಳದಲ್ಲಿದ್ದ ಅಧಿಕಾರಿಗಳು ತಿಳಿಸಿದ್ದಾರೆ.