ಎರಡು ಬಾರಿಯ ಸಂಸದ ಪ್ರತಾಪ್ ಸಿಂಹಗೆ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಿಂದ ಟಿಕೆಟ್ ತಪ್ಪಿಸಿದ್ದೇ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಎಂದು ಸಚಿವ ಕೆ. ವೆಂಕಟೇಶ್ ಹೊಸ ಬಾಂಬ್ ಸಿಡಿಸಿದ್ದಾರೆ.
ಮೈಸೂರಿನಲ್ಲಿ ಮಂಗಳವಾರ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು, ನಾನು ಕೂಡ ದೇವೇಗೌಡರ ಸಂಬಂಧಿ, ಆದರೆ ಸ್ವಾರ್ಥ ರಾಜಕಾರಣ ನೋಡಿ ರಾಜಕೀಯ ತೊರೆಯಲು ನಿರ್ಧರಿಸಿದ್ದೆ. ಆದರೆ ಸಿದ್ದರಾಮಯ್ಯ ನನ್ನನ್ನು ರಾಜಕೀಯದಲ್ಲಿ ಉಳಿಸಿಕೊಂಡರು ಎಂದರು.
ಪ್ರತಾಪ್ ಸಿಂಹ ಹೊರಗಿನಿಂದ ಬಂದರೂ ನಾನು ಒಕ್ಕಲಿಗ ಎಂದು ಹೇಳಿಕೊಂಡು ಚುನಾವಣೆಯಲ್ಲಿ ಗೆದ್ದು ಬಂದಿದ್ದರು. ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್ ಒಕ್ಕಲಿಗ ಅಲ್ಲ ಅಂತ ಅವರೇ ಹೇಳುತ್ತಾರೆ. ಆದರೆ ನಾನು ದೇವೇಗೌಡ ಸಂಬಂಧಿ. ಲಕ್ಷ್ಮಣ್ ಕೂಡ ನಮಗೆ ಸಂಬಂಧಿಯೇ. ಹಾಗಾಗಿ ಅವರು ಒಕ್ಕಲಿಗ ಎಂಬುದು ನಿಜ ಎಂದು ಅವರು ಹೇಳಿದರು.