Wednesday, September 30, 2026
Google search engine
Homeರಾಜ್ಯಪಿಎಸ್ಐ ಕೆನ್ನೆಗೆ ಬಾರಿಸಿದ ಮಗಳು: ಕ್ಷಮೆ ಕೋರಿದ ತಂದೆ ಬಿಜೆಪಿ ಶಾಸಕ

ಪಿಎಸ್ಐ ಕೆನ್ನೆಗೆ ಬಾರಿಸಿದ ಮಗಳು: ಕ್ಷಮೆ ಕೋರಿದ ತಂದೆ ಬಿಜೆಪಿ ಶಾಸಕ

ಬೆಂಗಳೂರು:ಮಹಿಳಾ ಪೊಲೀಸ್ ಸಬ್ ಇನ್ಸ್‌ಪೆಕ್ಟರ್‌ (ಪಿಎಸ್ಐ) ಕೆನ್ನೆಗೆ ಬಾರಿಸಿದ ತಮ್ಮ ಮಗಳ ವರ್ತನೆಗೆ ತುಮಕೂರು ಗ್ರಾಮಾಂತರ ಬಿಜೆಪಿ ಶಾಸಕ ಸುರೇಶ್ ಗೌಡ ಬಹಿರಂಗ ಕ್ಷಮೆ ಕೋರಿದ್ದಾರೆ.

ವಿಧಾನಸೌಧದಲ್ಲಿ ಶುಕ್ರವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಭೀಮನ ಅಮಾವಾಸ್ಯೆ ದಿನ ನನ್ನ ಮಗಳು ದೇವಸ್ಥಾನಕ್ಕೆ ಹೋಗಿದ್ದಾಳೆ. ಇಬ್ಬರೂ ಚಿಕ್ಕ ಮಕ್ಕಳಿದ್ದರು. ಸಬ್ ಇನ್ಸ್​​​​​ಪೆಕ್ಟರ್​ ಒಳಗೆ ಬಿಡಲಿಲ್ಲ. ಅಲ್ಲಿ ಏನಾಯ್ತು ಎನ್ನುವುದು ನನಗೆ ಗೊತ್ತಿಲ್ಲ. ನನ್ನ ಮಗಳ ತಪ್ಪಿದರೆ ಸಾರ್ವಜನಿಕವಾಗಿ ನಾನು ಕ್ಷಮೆ ಕೇಳುತ್ತೇನೆ ಎಂದರು.

ನನ್ನ ಮಗಳ ದೂರು ಏನಿತ್ತು ಎನ್ನುವುದನ್ನು ಪಿಎಸ್ ಐ ಕೇಳಬೇಕಿತ್ತು. ನಾನು ಹಿರಿಯ ಪೊಲೀಸ್ ಅಧಿಕಾರಿಗಳ ಜತೆ ಮಾತಾಡಿದ್ದೇನೆ. ಕ್ರಿಯೆಗೆ ಪ್ರತಿಕ್ರಿಯೆ ಇದ್ದೇ ಇರುತ್ತದೆ. ಮಾತಿಗೆ ಮಾತು ಬೆಳೆದಿರುತ್ತದೆ. ನನ್ನ ಮಗಳ ಪರವಾಗಿ ನಾನು ಕ್ಷಮೆ ಕೇಳುತ್ತೇನೆ. ನನ್ನ ಮಗಳು ತಾಳ್ಮೆ ಕಳ್ಕೊಂಡಿರಬಹುದು. ಮಗಳ ಪರವಾಗಿ‌ ನಾನು ಕ್ಷಮೆ ಕೇಳುತ್ತೇನೆ. ನಾವು ಸಾರ್ವಜನಿಕ ಜೀವನದಲ್ಲಿರುವವರು ಆ ರೀತಿಯಲ್ಲಿ ನಡೆದುಕೊಳ್ಳಬಾರದು” ಎಂದು ವಿಷಾದ ವ್ಯಕ್ತಪಡಿಸಿದರು.

ಭೀಮನ ಅಮವಾಸ್ಯೆ ದಿನ ನನ್ನ ಮಗಳು ಆರತಿ ಉಕ್ಕಡ ದೇವಸ್ಥಾನಕ್ಕೆ ಹೋಗಿದ್ದಳು. ಸರತಿ ಸಾಲಿನಲ್ಲಿ ನಿಂತಿದ್ದರು. ಒಳಗೆ ಬಿಡುವಂತೆ ಪಿಎಸ್‌ಐ ಅವರಿಗೆ ಕೇಳಿದಾಗ, ಅದೇ ಸಮಯದಲ್ಲಿ ಇನ್ನೊಬ್ಬರನ್ನು ಬಿಟ್ಟಿದ್ದಕ್ಕೆ ಮಾತಿಗೆ ಮಾತು ಬೆಳೆದು ವಾಗ್ವಾದವಾಗಿದೆ. ಈ ವೇಳೆ ಪೊಲೀಸರ ಜೊತೆ ಗಲಾಟೆ ಆಗಿದೆ. ನಾನು ಮಗಳು ಮಾಡಿದ್ದು ಸರಿಯಾಗಿದೆ ಎಂದು ಸಮರ್ಥಿಸಿಕೊಳ್ಳುವುದಿಲ್ಲ. ತಪ್ಪು ಮಾಡಿದ್ದರೆ ಶಿಕ್ಷೆ ಆಗಲಿ ಎಂದಿದ್ದಾರೆ.

ಯಾರೇ ಆಗಿರಲಿ ತಪ್ಪು ಮಾಡಿದ್ದರೆ ಶಿಕ್ಷೆಯಾಗಲಿ. ಕಾನೂನು ಏನಿದೆ ಅದನ್ನು ನಾವು ಎದುರಿಸುತ್ತೇವೆ. ನನ್ನ ಮಗಳು ನೀಡಿದ್ದ ದೂರನ್ನು ಹಿಂಪಡೆಯಬೇಕಿತ್ತು. ನಾವು ಮತ್ತು ನಮ್ಮ ಕುಟುಂಬದವರೆಲ್ಲರೂ ದೈವಭಕ್ತರು, ಹೀಗೆ ಆಗಬಾರದಿತ್ತು. ಸಾರ್ವಜನಿಕ ಮತ್ತು ಧಾರ್ಮಿಕ ಸ್ಥಳಗಳಲ್ಲಿ ವಿಐಪಿ ಪ್ರೋಟೋಕಾಲ್ ವ್ಯವಸ್ಥೆಯನ್ನು ತೆಗೆದುಹಾಕಬೇಕು. ದೇವರ ಮುಂದೆ ನಾವೆಲ್ಲರೂ ಸಮಾನರು. ಈ ವಿಚಾರವನ್ನು ಇಲ್ಲಿಗೆ ಬಿಟ್ಟುಬಿಡಿ, ಅನಗತ್ಯವಾಗಿ ಬೆಳೆಸಬೇಡಿ ಎಂದು ಮನವಿ ಮಾಡಿದರು.

ದೂರು-ಪ್ರತಿದೂರು ದಾಖಲು:

ಮಂಡ್ಯ ಜಿಲ್ಲೆಯ ಆರತಿ ಉಕ್ಕಡದಲ್ಲಿ ದೇವರ ದರ್ಶನ ಪಡೆಯುವ ಸಂದರ್ಭದಲ್ಲಿ ಕರ್ತವ್ಯದಲ್ಲಿದ್ದ ಮಹಿಳಾ ಪಿಎಸ್ ಐಯನ್ನು  ಶಾಸಕರ ಪುತ್ರಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಕಪಾಳಕ್ಕೆ ಹೊಡೆದ ಆರೋಪ ಕೇಳಿಬಂದಿದೆ.

ಆಗಸ್ಟ್ 12ರಂದು ರಾತ್ರಿ ಸುಮಾರು 8.15ರ ವೇಳೆಗೆ ಭೀಮನ ಅಮಾವಾಸ್ಯೆ ಹಿನ್ನೆಲೆಯಲ್ಲಿ ವಿಶೇಷ ಭದ್ರತಾ ಕರ್ತವ್ಯಕ್ಕೆ ಮಂಡ್ಯ ಮಹಿಳಾ ಪೊಲೀಸ್ ಠಾಣೆಯ ಪಿಎಸ್‌ಐ ಸವಿತಾ ಬಿ. ಪಾಟೀಲ್ ಅವರನ್ನು ನಿಯೋಜಿಸಲಾಗಿತ್ತು. ತುಮಕೂರು ಗ್ರಾಮಾಂತರ ಬಿಜೆಪಿ ಶಾಸಕ ಬಿ. ಸುರೇಶ್‌ಗೌಡ ಅವರ ಪುತ್ರಿ ಹಾಗೂ ಎಸಿಪಿ ಗೌತಮ್ ಅವರ ಪತ್ನಿ ಐಶ್ವರ್ಯ ದರ್ಶನಕ್ಕೆ ಅವಕಾಶ ನೀಡುವುದು ತಡವಾದ ವಿಚಾರವಾಗಿ ಪಿಎಸ್‌ಐ ಜೊತೆ ವಾಗ್ವಾದ ನಡೆಸಿದ್ದಾರೆ.

ಅವಾಚ್ಯವಾಗಿ ನಿಂದನೆ:

ಈ ವೇಳೆ ಐಶ್ವರ್ಯ ಪಿಎಸ್‌ಐ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಕಪಾಳಕ್ಕೆ ಹೊಡೆದು, ಹಲ್ಲೆ ನಡೆಸಿ, ಕರ್ತವ್ಯಕ್ಕೆ ಅಡ್ಡಿಪಡಿಸಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಪಾಂಡವಪುರ ತಾಲೂಕಿನ ಕ್ಯಾತನಹಳ್ಳಿ ಪೊಲೀಸ್ ಠಾಣೆಯಲ್ಲಿ ಐಶ್ವರ್ಯ ವಿರುದ್ಧ ಬಿಎನ್‌ಎಸ್‌ನ ಸೆಕ್ಷನ್‌ 132, 115(2), 352 ಮತ್ತು 351(2) ಅಡಿಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

ಇದೇ ವೇಳೆ, ಮಹಿಳಾ ಪಿಎಸ್‌ಐ ವಿರುದ್ಧವೂ ಪ್ರತಿದೂರು ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಶಾಸಕರ ಪುತ್ರಿಯನ್ನು ಪಿಎಸ್‌ಐ ಕೂಡ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂಬ ಆರೋಪದಡಿ ಈ ಪ್ರತಿದೂರು ನೀಡಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments