Friday, August 14, 2026
Google search engine
Homeದೇಶಸಣ್ಣ ಸಾಲಗಾರರಿಗೆ ಸಿಹಿಸುದ್ದಿ: ಬ್ಯಾಂಕ್‌ ಗಳ ಬೇಕಾಬಿಟ್ಟಿ ಬಡ್ಡಿಗೆ ಆರ್​ಬಿಐ ಬ್ರೇಕ್

ಸಣ್ಣ ಸಾಲಗಾರರಿಗೆ ಸಿಹಿಸುದ್ದಿ: ಬ್ಯಾಂಕ್‌ ಗಳ ಬೇಕಾಬಿಟ್ಟಿ ಬಡ್ಡಿಗೆ ಆರ್​ಬಿಐ ಬ್ರೇಕ್

ನವದೆಹಲಿ: ಬ್ಯಾಂಕುಗಳು ಮತ್ತು ಎನ್‌ಬಿಎಫ್‌ಸಿಗಳು ಸಣ್ಣ ಸಾಲಗಾರರಿಗೆ ವಿಧಿಸುವ ಬಡ್ಡಿ ದರ ಮತ್ತು ಹೆಚ್ಚುವರಿ ಶುಲ್ಕಗಳಿಗೆ ಸಂಬಂಧಿಸಿದಂತೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ಹೊಸ ನಿಯಮಗಳನ್ನು ಪ್ರಸ್ತಾವಿಸಿದೆ.

ಸಾಲದ ಮೇಲಿನ ಅತಿಯಾದ ದರ ಅಥವಾ ವೆಚ್ಚವನ್ನು ಕಡಿಮೆ ಮಾಡುವುದು ಮತ್ತು ಪಾರದರ್ಶಕತೆಯನ್ನು ಹೆಚ್ಚಿಸುವುದು ಇದರ ಮುಖ್ಯ ಉದ್ದೇಶವಾಗಿದೆ.

ಹಲವು ಬ್ಯಾಂಕುಗಳು ಕ್ರೆಡಿಟ್ ಸ್ಕೋರ್ ಕಡಿಮೆ ಇರುವ ಗ್ರಾಹಕರಿಗೆ ವರ್ಷಕ್ಕೆ ಶೇ. 36ರವರೆಗಿನ ಬಡ್ಡಿದರಲ್ಲಿ ವೈಯಕ್ತಿಕ ಸಾಲ ನೀಡುವುದುಂಟು. ಕೆಲ ಎನ್​ಬಿಎಫ್​ಸಿಗಳು ಇನ್ನೂ ಹೆಚ್ಚಿನ ಬಡ್ಡಿದರ ನಿಗದಿ ಮಾಡುವುದುಂಟು.

ಫೈನಾನ್ಷಿಯರ್​ಗಳ ರೀತಿಯಲ್ಲಿ ಈ ಹಣಕಾಸು ಸಂಸ್ಥೆಗಳು ಗ್ರಾಹಕರಿಂದ ಬಹುತೇಕ ಸುಲಿಗೆ ಮಾಡುತ್ತವೆ. ಆರ್​ಬಿಐ ಪ್ರಸ್ತಾಪಿಸಿದ ಈ ನಿಯಮಗಳು ಜಾರಿಗೆ ಬಂದಲ್ಲಿ ಈ ಸುಲಿಗೆಗಳಿಗೆ ಕಡಿವಾಣ ಬಿದ್ದೀತು. ಬ್ಯಾಂಕುಗಳು ಮಿತಿ ಮೀರಿದ ಬಡ್ಡಿದರದಲ್ಲಿ ಸಾಲ ನೀಡಲಾಗುವುದಿಲ್ಲ.

ವಾರ್ಷಿಕ ದರ ನಿಯಂತ್ರಣ: ಆರ್‌ಬಿಐ ಪ್ರಸ್ತಾವನೆಯಂತೆ, ಸಾಲದಾತರು ವಾರ್ಷಿಕ ಶೇಕಡಾವಾರು ದರಕ್ಕೆ (ಎಪಿಆರ್ ) ಗರಿಷ್ಠ ಮಿತಿಯನ್ನು ನಿಗದಿಪಡಿಸಬೇಕು. ಈ ಎಪಿಆರ್ ದರದಲ್ಲಿ ಸಾಲದ ಬಡ್ಡಿ ದರದೊಂದಿಗೆ ಎಲ್ಲಾ ಇತರ ಗುಪ್ತ ಶುಲ್ಕಗಳು ಕೂಡ ಸೇರಿರುತ್ತವೆ.

ಸಣ್ಣ ಸಾಲದ ವ್ಯಾಖ್ಯಾನ:

ಒಬ್ಬ ವ್ಯಕ್ತಿ ಪಡೆಯುವ 50,000 ವರೆಗಿನ ವೈಯಕ್ತಿಕ ಸಾಲವನ್ನು ‘ಸಣ್ಣ ಮೌಲ್ಯದ ಸಾಲ’  ಎಂದು ವರ್ಗೀಕರಿಸಲಾಗಿದೆ. ಇಂತಹ ಸಾಲಗಳಿಗೆ ವಿಧಿಸುವ ಬಡ್ಡಿ ಮತ್ತು ಶುಲ್ಕಗಳು ಸುಲಿಗೆಯಂತಿರಬಾರದು ಎಂದು ಆರ್‌ಬಿಐ ಎಚ್ಚರಿಸಿದೆ.

ಯಾರಿಗೆ ಅನ್ವಯ?:

ಈ ನಿಯಮಗಳು ಅಂತಿಮಗೊಂಡ ನಂತರ ಎಲ್ಲಾ ವಾಣಿಜ್ಯ ಬ್ಯಾಂಕುಗಳು, ಎನ್‌ಬಿಎಫ್‌ಸಿಗಳು, ಅಡಮಾನ ಸಾಲದಾತರು, ಸಹಕಾರಿ ಬ್ಯಾಂಕುಗಳು ಮತ್ತು ಅಖಿಲ ಭಾರತ ಹಣಕಾಸು ಸಂಸ್ಥೆಗಳಿಗೆ ಅನ್ವಯವಾಗುತ್ತದೆ.
ಪಾರದರ್ಶಕತೆ:

ಸಾಲದ ದರ ನಿಗದಿಪಡಿಸುವ ವಿಧಾನವು ಪಾರದರ್ಶಕವಾಗಿರಬೇಕು ಮತ್ತು ಸಾಲದಾತರು ತಮ್ಮ ಬೋರ್ಡ್ ಆಫ್ ಡೈರೆಕ್ಟರ್‌ಗಳಿಂದ ಅನುಮೋದಿತವಾದ ಸಮಗ್ರ ನೀತಿಯನ್ನು ಹೊಂದಿರಬೇಕು.

ಬಡ್ಡಿದರ ನಿರ್ಧಾರ: ಸಾಲದ ಬಡ್ಡಿದರಗಳನ್ನು ಆಂತರಿಕ ಮಾನದಂಡ ಅಥವಾ ಬಾಹ್ಯ ಮಾನದಂಡ ಮತ್ತು ರಿಸ್ಕ್ ಆಧರಿಸಿ ನಿರ್ಧರಿಸಬೇಕು. ಯಾವುದೇ ಸಾಲವನ್ನು ನಿಗದಿಪಡಿಸಿದ ಮಾನದಂಡಕ್ಕಿಂತ ಕಡಿಮೆ ದರದಲ್ಲಿ ನೀಡುವಂತಿಲ್ಲ.

ಈ ಕ್ರಮವು ಸಾಲಗಾರರಿಗೆ, ವಿಶೇಷವಾಗಿ ಸಣ್ಣ ಪ್ರಮಾಣದ ಸಾಲ ಪಡೆಯುವವರಿಗೆ ಹೆಚ್ಚಿನ ರಕ್ಷಣೆ ನೀಡಲಿದೆ. ಇದು ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು ಅತಿಯಾದ ಬಡ್ಡಿ ಅಥವಾ ಗುಪ್ತ ಶುಲ್ಕಗಳನ್ನು ವಿಧಿಸುವುದನ್ನು ತಡೆಯುವ ಉದ್ದೇಶವನ್ನು ಹೊಂದಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments