ಕೇಂದ್ರ ಚುನಾವಣಾ ಆಯೋಗದ ಆಯುಕ್ತ ರಾಜೀವ್ ಕುಮಾರ್ ಮತ್ತು ಉತ್ತರಾಖಂಡ್ ನ ಹೆಚ್ಚುವರಿ ಚುನಾವಣಾ ಅಧಿಕಾರಿ ವಿಯಜ್ ಕುಮಾರ್ ಜೊಗ್ದಾಂಡೆ ಪ್ರಯಾಣಿಸುತ್ತಿದ್ದ ಹೆಲಿಕಾಫ್ಟರ್ ಉತ್ತರಾಖಂಡ್ ನಲ್ಲಿ ತುರ್ತು ಭೂಸ್ಪರ್ಶ ಮಾಡಿದೆ.
ಉತ್ತರಾಖಂಡ್ ನ ಪಿತೋರಾಗಢ್ ನಲ್ಲಿ ಬುಧವಾರ ಸಂಜೆ ಹೆಲಿಕಾಫ್ಟರ್ ತುರ್ತು ಭೂಸ್ಪರ್ಶ ಮಾಡಿದ್ದು, ಹೆಲಿಕಾಫ್ಟರ್ ನಲ್ಲಿದ್ದ ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು ತಿಳಿದು ಬಂದಿದೆ.
ಉತ್ತರಾಖಂಡ್ ನ ರುದ್ರಪ್ರಯಾಗ್ ಜಿಲ್ಲೆಯ ಕೇದಾರ್ ನಾಥ್ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ದಿನಾಂಕವನ್ನು ಮಂಗಳವಾರ ಘೋಷಿಸಿದ್ದ ಕೇಂದ್ರ ಚುನಾವಣಾ ಆಯುಕ್ತರು ಇಂದು ಚುನಾವಣಾ ಸಿದ್ಧತೆ ಕುರಿತು ಪರಿಶೀಲನೆಗೆ ತೆರಳಿದ್ದಾಗ ಈ ಘಟನೆ ಸಂಭವಿಸಿದೆ.
ಹೆಲಿಕಾಫ್ಟರ್ ತುರ್ತು ಭೂಸ್ಪರ್ಶಕ್ಕೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ. ಹವಾಮಾನ ವೈಪರಿತ್ಯವೋ ಅಥವಾ ತಾಂತ್ರಿಕ ದೋಷವೋ ಎಂಬುದು ಇನ್ನಷ್ಟೇ ತಿಳಿದು ಬರಬೇಕಿದೆ.