ಬಾಲಿವುಡ್ ನಟಿ ಹಾಗೂ ಬಿಜೆಪಿ ಸಂಸದೆ ಕಂಗನಾ ರಾಣವತ್ ನಿರ್ದೇಶಿಸಿ ನಟಿಸಿರುವ ವಿವಾದಾತ್ಮಕ ಚಿತ್ರ ಎಮರ್ಜೆನ್ಸಿ ಚಿತ್ರಕ್ಕೆ ಸೆನ್ಸಾರ್ ಮಂಡಳಿ ಕೊನೆಗೂ ಅನುಮತಿ ನೀಡಿದೆ.
1975-177ರ ನಡುವೆ ಮಾಜಿ ಪ್ರಧಾನಿ ಇಂದಿರಾ ಗಾಂಧಿ ವಿಧಿಸಿದ್ದ ತುರ್ತು ಪರಿಸ್ಥಿತಿ ಅವಧಿಯ ಕಥೆಯನ್ನೊಳಗೊಂಡ ಎಮರ್ಜೆನ್ಸಿ ಚಿತ್ರ ಬಿಡುಗಡೆಗೆ ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಟ್ (CBFC) ಅನುಮತಿ ನೀಡಿದೆ ಎಂದು ಕಂಗನಾ ರಾಣಾವತ್ ತಮ್ಮ ಇನ್ ಸ್ಟಾಗ್ರಾಂ ನಲ್ಲಿ ಪೋಸ್ಟ್ ಹಾಕಿದ್ದಾರೆ.
ಎಮರ್ಜೆನ್ಸಿ ಚಿತ್ರಕ್ಕೆ ನಮಗೆ ಸೆನ್ಸಾರ್ ಮಂಡಳಿಯಿಂದ ಸರ್ಟಿಫಿಕೇಟ್ ಲಭಿಸಿದೆ. ಶೀಘ್ರದಲ್ಲೇ ಚಿತ್ರದ ಬಿಡುಗಡೆ ದಿನಾಂಕವನ್ನು ಘೋಷಿಸಲಾಗುವುದು ಎಂದು ಕಂಗನಾ ಹೇಳಿಕೊಂಡಿದ್ದಾರೆ.
ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ಘೋಷಣೆ ಹಾಗೂ ಅವರನ್ನು ಸಿಖ್ ಸಮುದಾಯದ ಮುಖಂಡರು ಹತ್ಯೆ ಮಾಡಿದ ಕುರಿತು ಚಿತ್ರ ಇದೆ ಎಂಬ ಕಾರಣಕ್ಕೆ ಸಾಕಷ್ಟು ವಿವಾದ ಸೃಷ್ಟಿಸಿದ್ದು, ಚಿತ್ರಕ್ಕೆ ಸೆನ್ಸಾರ್ ಮಂಡಳಿ ಅನುಮತಿ ನೀಡದೇ ಸತಾಯಿಸಿತ್ತು. ಅಲ್ಲದೇ ಚಿತ್ರದಲ್ಲಿ ಹಲವು ಆಕ್ಷೇಪಾರ್ಹ ದೃಶ್ಯಗಳಿಗೆ ಕಡಿತ ಮಾಡಬೇಕು ಹಾಗೂ ತೆಗೆದು ಹಾಕಬೇಕು ಎಂದು ಸೂಚಿಸಿತ್ತು.
ಎಮರ್ಜೆನ್ಸಿ ಚಿತ್ರ ಬಿಡುಗಡೆಗೆ ಅನುಮತಿ ದೊರೆಯದ ಕಾರಣ ಕಂಗನಾ ಕಂಗಾಲಾಗಿದ್ದರು. ಅಲ್ಲದೇ ಮುಂಬರುವ ಪಂಜಾಬ್ ವಿಧಾನಸಭಾ ಚುನಾವಣೆ ನಂತರ ಚಿತ್ರ ಬಿಡುಗಡೆಗೆ ಬಿಜೆಪಿ ಮುಖಂಡರು ಸೂಚಿಸಿದ್ದಾರೆ ಎಂದು ಹೇಳಲಾಗಿತ್ತು.