ಬೆಂಗಳೂರಿನಲ್ಲಿ ಭಾರೀ ಮಳೆಯಿಂದ ಜನರು ತತ್ತರಿಸಿದ್ದಾರೆ. ಆದರೆ ಮಳೆಯ ನಂತರ ಕಾಡುವ ಸಾಂಕ್ರಮಿಕ ಕಾಯಿಲೆಗಳ ಭೀತಿ ಆವರಿಸಿದ್ದು, ಇದನ್ನು ತಡೆಯಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸಕಲ ಸಿದ್ಧತೆ ಹಮ್ಮಿಕೊಂಡಿದೆ.
ಬೆಂಗಳೂರಿನಲ್ಲಿ ಕಳೆದ ಕೆಲವು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಇನ್ನೂ ಕೆಲವು ದಿನ ಭಾರೀ ಮಳೆ ಅಬ್ಬರ ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದ್ದು, ಯೆಲ್ಲೋ ಅಲರ್ಟ್ ಘೋಷಿಸಿದೆ.
ಭಾರೀ ಮಳೆಯಿಂದ ಬೆಂಗಳೂರಿನ ಹಲವು ಪ್ರದೇಶಗಳು ಮುಳುಗಡೆ ಆಗಿವೆ. ರಸ್ತೆಗಳೆಲ್ಲಾ ಜಲಾವ್ರತಗೊಂಡಿದ್ದು, ಇತ್ತೀಚೆಗಷ್ಟೇ ಮುಚ್ಚಿದ್ದ ಗುಂಡಿಗಳು ಮತ್ತೆ ತೆರೆದುಕೊಂಡಿದ್ದು ವಾಹನ ಸವಾರರ ಪರದಾಟ ಮುಂದುವರಿದಿದೆ.
ಮಳೆ ಹಿನ್ನೆಲೆಯಲ್ಲಿ ಬೆಂಗಳೂರಿನ ಮಹದೇವಪುರ, ಯಲಹಂಕ, ರಾಜರಾಜೇಶ್ವರಿ ನಗರ, ಬೊಮ್ಮನಹಳ್ಳಿ ಸೇರಿದಂತೆ ಹಲವು ಮಳೆಪೀಡಿತ ಪ್ರದೇಶಗಳಲ್ಲಿ ಬೀದಿಬದಿ ಆಹಾರ, ಕತ್ತರಿಸಿದ ಹಣ್ಣುಗಳ ಮಾರಾಟವನ್ನು ನಿಷೇಧಿಸಿರುವ ಬಿಬಿಎಂಪಿ ಈ ಪ್ರದೇಶಗಳಲ್ಲಿ ಆರೋಗ್ಯ ತಪಾಸಣೆ ಶಿಬಿರಗಳನ್ನು ನಿಯೋಜಿಸಲಾಗಿದೆ.
ಹೋಟೆಲ್ ಗಳಲ್ಲಿ ಗ್ರಾಹಕರಿಗೆ ಕುಡಿಯಲು ಬಿಸಿ ನೀರು ನೀಡಬೇಕು. ಶುದ್ಧ ಕುಡಿಯುವ ನೀರು ದೃಢೀಕರಿಸಿಕೊಳ್ಳಬೇಕು ಎಂದು ಬೆಂಗಳೂರಿನ ಹೋಟೆಲ್ ಗಳಿಗೆ ಬಿಬಿಎಂಪಿ ಸೂಚಿಸಿದೆ. ಅಲ್ಲದೇ ಜಲಮಂಡಳಿ ನೀರಿನ ಗುಣಮಟ್ಟ ದೃಢಪಡಿಸಿಕೊಳ್ಳಲು ಸೂಚಿಸಿದೆ.