ದ್ವೇಷ ರಾಜಕಾರಣ ದೇಶದ ಶತ್ರು, ದ್ರಾವಿಡ ಹೆಸರಲ್ಲಿ ವಂಚಿಸಲಾಗುತ್ತಿದೆ. ಇದನ್ನು ತಡೆದು ಜಾತ್ಯತೀತ, ನ್ಯಾಯಯುತವಾಗಿ ನಡೆದುಕೊಳ್ಳುವುದೇ ನಮ್ಮ ರಾಜಕೀಯ ಸಿದ್ಧಾಂತ ಎಂದು ನಟ ವಿಜಯ್ ಮೊದಲ ರಾಜಕೀಯ ಭಾಷಣದಲ್ಲಿ ಹೇಳಿದ್ದಾರೆ.
ವಿಕ್ರವಾಂಡಿ ಜಿಲ್ಲೆಯ ವೆಲ್ಲುಪುರಂನಲ್ಲಿ ಭಾನುವಾರ ತಮಿಳಿಗ ವೆಟ್ರಿ ಕಜಕಮ್ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಇಲ್ಲಿ ಸೇರಿರುವ ಜನರು ಹಣಕ್ಕಾಗಿ ಬಂದಿಲ್ಲ. ಬದಲಾಗಿ ಬದಲಾವಣೆಗಾಗಿ ಬಂದಿದ್ದಾರೆ. ಬದಲಾವಣೆ ತರುವುದೇ ನಮ್ಮ ಗುರಿ. ಈ ವಿಷಯದಲ್ಲಿ ಹಿಂತಿರುಗಿ ನೋಡುವ ಪ್ರಶ್ನೆಯೇ ಇಲ್ಲ ಎಂದರು.
ಜಾತಿ-ಧರ್ಮದ ಹೆಸರಿನಲ್ಲಿ ರಾಜಕೀಯ ನಡೆಯುತ್ತಿದೆ. ಆದರೆ ಅಂತರದಲ್ಲಿ ಇದೆಲ್ಲಾ ವ್ಯವಹಾರಿಕವಾಗಿವೆ. ದ್ರಾವಿಡರ ಹೆಸರಿನಲ್ಲಿ ಅಲ್ಪ ಸಂಖ್ಯಾತರನ್ನು, ಸಾಮಾನ್ಯ ಜನರನ್ನು ವಂಚಿಸಲಾಗುತ್ತಿದೆ ಎಂದು ಅವರು ಹೇಳಿದರು.
ಇದೇ ವೇಳೆ ದೇಶದಲ್ಲಿ ದ್ವೇಷ ರಾಜಕಾರಣ ಮಾಡುತ್ತಿರುವ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡ ಅವರು, ದ್ವೇಷದ ರಾಜಕಾರಣ, ದೇಶದ, ನಮ್ಮ ನಿಮ್ಮೆಲ್ಲರ ಶತ್ರು. ನಾನು ಯಾವುದೇ ಕಾರಣಕ್ಕೂ ನಮ್ಮ ಪಕ್ಷ ದ್ವೇಷ ರಾಜಕಾರಣ ಮಾಡಲ್ಲ. ಒಡೆದು ಆಳುವ ನೀತಿ ಅನುಸರಿಸಲ್ಲ ಎಂದು ವಿಜಯ್ ಸ್ಪಷ್ಟಪಡಿಸಿದರು.
ಒಂದು ವರ್ಗ ದ್ವೇಷವನ್ನು ಸೃಷ್ಟಿಸುವ ಮೂಲಕ ದೇಶವನ್ನು ಒಡೆಯುವ ಪ್ರಯತ್ನ ನಡೆಸುತ್ತಿದೆ. ದೇಶವನ್ನು ಒಡೆಯುವವರು ನಮ್ಮ ಮೊದಲ ಶತ್ರು. ದ್ರಾವಿಡ ಸಿದ್ಧಾಂತದ ಮೂಲಕ ತಮಿಳುನಾಡಿನಲ್ಲಿ ಒಡೆದು ಆಳುವವರು ನಮ್ಮ ಎರಡನೇ ಶತ್ರು.
ಸೈದ್ಧಾಂತಿಕವಾಗಿ ಬಿಜೆಪಿ ನಮ್ಮ ಮೊದಲ ಶತ್ರು. ಡಿಎಂಕೆ ರಾಜಕೀಯ ವಿರೋಧಿ. ನಾನು ಯಾವುದೇ ಉದ್ದೇಶಗಳನ್ನು ಇಟ್ಟುಕೊಂಡು ರಾಜಕೀಯಕ್ಕೆ ಬಂದಿಲ್ಲ. ಹಿಂದೆ ರಾಜಕೀಯ ಯಾಕೆ ಎಂದು ಹೇಳುತ್ತಿದ್ದೆ. ಆದರೆ ಈಗ ಉತ್ತಮ ಉದ್ದೇಶದ ರಾಜಕೀಯ ಪಕ್ಷದ ಅಗತ್ಯ ಹಿನ್ನೆಲೆಯಲ್ಲಿ ಬಂದಿದ್ದೇನೆ ಎಂದು ಅವರು ಹೇಳಿದರು.