ನವದೆಹಲಿ: ಐಟಿ ಉದ್ಯಮಕ್ಕೆ ವರ್ಕ್ ಪ್ರಮ್ ಹೋಮ್ ಕುರಿತು ಯಾವುದೇ ಕಡ್ಡಾಯ ಮಾರ್ಗಸೂಚಿ ಅಥವಾ ಅಧಿಕೃತ ನಿರ್ದೇಶನಗಳನ್ನು ನೀಡುವ ಯೋಜನೆ ಸದ್ಯಕ್ಕಿಲ್ಲ. ಪ್ರಧಾನಿ ಕೇವಲ ರಾಷ್ಟ್ರೀಯ ಹಿತದೃಷ್ಟಿಯಿಂದ ಇಂಧನ ಉಳಿಸಲು ಮತ್ತು ವಿದೇಶಿ ವಿನಿಮಯವನ್ನು ಸಂರಕ್ಷಿಸಲು ಮನವಿ ಮಾಡಿದ್ದಾರೆಯೇ ಹೊರತು, ಯಾವುದೇ ಕಟ್ಟುನಿಟ್ಟಿನ ನಿರ್ಬಂಧಗಳನ್ನು ಹೇರಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.
ಐಟಿ ಕಂಪನಿಗಳು ಈಗಾಗಲೇ ತಮ್ಮ ಕಾರ್ಯಾಚರಣೆಯ ಅವಶ್ಯಕತೆಗೆ ಅನುಗುಣವಾಗಿ ಹೈಬ್ರಿಡ್ ಅಥವಾ ರಿಮೋಟ್ ಮಾದರಿಯಲ್ಲಿ ಕೆಲಸ ಮಾಡುತ್ತಿರುವುದರಿಂದ ಸರ್ಕಾರದ ಹಸ್ತಕ್ಷೇಪದ ಅಗತ್ಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಮೆರಿಕ ಮತ್ತು ಇರಾನ್ ನಡುವಿನ ಯುದ್ಧದಿಂದ ಉಂಟಾಗಿರುವ ಆರ್ಥಿಕ ಬಿಕ್ಕಟ್ಟು ಮತ್ತು ಜಾಗತಿಕ ಇಂಧನ ಬೆಲೆ ಏರಿಕೆಯ ಹಿನ್ನೆಲೆಯಲ್ಲಿ, ಮಿತವ್ಯಯ ಸಾಧಿಸಲು ಕೋವಿಡ್ ಕಾಲದ ‘ವರ್ಕ್ ಪ್ರಮ್ ಹೋಮ್’ ಮತ್ತು ವರ್ಚುವಲ್ ಸಭೆಗಳಂತಹ ದಕ್ಷ ಪದ್ಧತಿಗಳನ್ನು ಮತ್ತೆ ಅಳವಡಿಸಿಕೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಕರೆ ನೀಡಿದ್ದರು. ಈ ಹೇಳಿಕೆಯು ಕಾರ್ಪೊರೇಟ್ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾದ ಬೆನ್ನಲ್ಲೇ, ಕೇಂದ್ರ ಸರ್ಕಾರವು ಈ ಕುರಿತು ಪ್ರಮುಖ ಸ್ಪಷ್ಟನೆ ನೀಡುವ ಮೂಲಕ ಉದ್ಯೋಗಿಗಳು ಮತ್ತು ಕಂಪನಿಗಳಲ್ಲಿದ್ದ ಗೊಂದಲವನ್ನು ನಿವಾರಿಸಲು ಈ ಸ್ಪಷ್ಟನೆಯನ್ನು ಕೇಂದ್ರ ಸರ್ಕಾರವು ನೀಡಿದೆ.
ಮಿತವ್ಯಯದ ಕ್ರಮಗಳ ಹೊರತಾಗಿಯೂ, ಎಲೆಕ್ಟ್ರಾನಿಕ್ಸ್ ಆಮದಿನ ಮೇಲೆ ಯಾವುದೇ ಹೊಸ ನಿರ್ಬಂಧಗಳನ್ನು ಹೇರುವ ಉದ್ದೇಶ ಸರ್ಕಾರಕ್ಕಿಲ್ಲ. ಎಲೆಕ್ಟ್ರಾನಿಕ್ಸ್ ಆಮದುಗಳು ದೇಶದ ಡಿಜಿಟಲ್ ಮೂಲಸೌಕರ್ಯ, ದೇಶೀಯ ಉತ್ಪಾದನೆ ಮತ್ತು ರಫ್ತು ವಲಯಕ್ಕೆ ಅತ್ಯಗತ್ಯವಾಗಿರುವುದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
2025-26ರ ಆರ್ಥಿಕ ವರ್ಷದಲ್ಲಿ ಭಾರತದ ಎಲೆಕ್ಟ್ರಾನಿಕ್ಸ್ ಆಮದು 116.17 ಬಿಲಿಯನ್ ಡಾಲರ್‌ಗೆ ತಲುಪಿದೆ. ಜಾಗತಿಕವಾಗಿ ಮೆಮೊರಿ ಚಿಪ್‌ಗಳ ಬೆಲೆ ಏರಿಕೆಯಾಗುತ್ತಿರುವುದು ಆಮದು ವೆಚ್ಚ ಹೆಚ್ಚಾಗಲು ಕಾರಣವಾಗಿದ್ದರೂ, ಎಐ ಸಗಳಂತಹ ತಂತ್ರಜ್ಞಾನಗಳು ಭಾರತದ ಡಿಜಿಟಲ್ ಬೆಳವಣಿಗೆಗೆ ಪೂರಕವಾಗಿವೆ ಎಂದು ಸರ್ಕಾರ ಹೇಳಿದೆ.



