Thursday, May 14, 2026
Google search engine
Homeಕಾನೂನುಪತ್ನಿಗೆ ಜೀವನಾಂಶ ನೀಡದಿದ್ದರೆ ಗಂಡನಿಗೆ ಜೈಲು: ಹೈಕೋರ್ಟ್ ಮಹತ್ವದ ತೀರ್ಪು

ಪತ್ನಿಗೆ ಜೀವನಾಂಶ ನೀಡದಿದ್ದರೆ ಗಂಡನಿಗೆ ಜೈಲು: ಹೈಕೋರ್ಟ್ ಮಹತ್ವದ ತೀರ್ಪು

ಬೆಂಗಳೂರು: ನ್ಯಾಯಾಲಯ ನಿಗದಿಪಡಿಸಿದ ಜೀವಾನಾಂಶವನ್ನು ಪತ್ನಿಗೆ ಪಾವತಿ ಮಾಡದ ಪತಿ ವಿರುದ್ಧ ಬಂಧನ ವಾರೆಂಟ್ ಜಾರಿ ಮಾಡಬಹುದಾಗಿದೆ ಎಂದು ಹೈಕೋರ್ಟ್ ಆದೇಶಿಸಿದೆ.

ನ್ಯಾಯಾಲಯದ ಆದೇಶ ಉಲ್ಲಂಘಿಸಿ ಪತ್ನಿಗೆ ಜೀವನಾಂಶ ಬಾಕಿ ಉಳಿಸಿಕೊಂಡಿರುವ ಹಿನ್ನೆಲೆಯಲ್ಲಿ ಬಂಧನ ವಾರಂಟ್ ಜಾರಿ ಮಾಡಿದ್ದ ಕೌಟುಂಬಿಕ ನ್ಯಾಯಾಲಯದ ಆದೇಶ ಪ್ರಶ್ನಿಸಿ ಸೈಲೇಶ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಡಾ.ಕೆ.ಮನ್ಮಥ ರಾವ್ ಅವರ ನ್ಯಾಯಪೀಠ ಈ ಆದೇಶ ನೀಡಿದೆ.

ಪ್ರಕರಣದಲ್ಲಿ ನ್ಯಾಯಾಲಯ ನಿಗದಿಪಡಿಸಿದ ಜೀವನಾಂಶದ ಹಣವನ್ನು ಪತ್ನಿಗೆ ಪಾವತಿಸಲು ವಿನಾಕಾರಣ ವಿಳಂಬ ಮಾಡುತ್ತಿದ್ದ ಅರ್ಜಿದಾರರ ನಡೆಗೆ ನ್ಯಾಯಪೀಠ ತೀವ್ರ ಅಸಮಾಧಾನ ವ್ಯಕ್ತಪಡಿಸಿ, ನ್ಯಾಯಾಲಯದ ಆದೇಶ ಪಾಲಿಸದೆ ಇರುವ ಪತಿಯ ವರ್ತನೆ ಉದ್ದೇಶಪೂರ್ವಕ ಅವಿಧೇಯತೆ ಎಂದ ಪೀಠ, ಅರ್ಜಿದಾರರ ವಿರುದ್ಧ ಮಂಗಳೂರು ಕೌಟುಂಬಿಕ ನ್ಯಾಯಾಲಯ ಹೊರಡಿಸಿದ್ದ ಬಂಧನ ವಾರಂಟ್‌ನ್ನು ಎತ್ತಿಹಿಡಿದಿದೆ.

ವಿಚಾರಣೆ ಬಾಕಿ, ಮಧ್ಯಂತರ ಆದೇಶಗಳ ನೆಪದಲ್ಲಿ ಜೀವನಾಂಶ ಪಾವತಿಗೆ ನ್ಯಾಯಾಲಯದ ಹೊರಡಿಸಿದ ಆದೇಶವನ್ನು ಪಾಲಿಸದೆ ಮುಂದೂಡಲು ಅನುಮತಿ ನೀಡಲಾಗುವುದಿಲ್ಲ. ವಿಚಾರಣಾ ನ್ಯಾಯಾಲಯದ ಆದೇಶ ಪಾಲಿಸದವರ ವಿರುದ್ಧ ಅಪರಾಧ ಪ್ರಕ್ರಿಯಾ ಸಂಹಿತೆ (ಸಿಆ‌ರ್ ಪಿಸಿ) ಸೆಕ್ಷನ್ 125(3) ಅಡಿಯಲ್ಲಿ ಬಂಧನ ವಾರಂಟ್ ಜಾರಿಗೆ ಅವಕಾಶವಿದೆ ಎಂದು ಪೀಠ ಹೇಳಿದೆ.

ಅರ್ಜಿದಾರ ಪತಿಗೆ ಪ್ರಕರಣ ಸಂಬಂಧ ಕಾರಣ ತಿಳಿಸಲು ಸೂಕ್ತ ಕಾಲಾವಕಾಶ ನೀಡಲಾಗಿದೆ. ಆದರೆ, ವಿಚಾರಣಾ ನ್ಯಾಯಾಲಯದ ಆದೇಶ ಪಾಲಿಸದೆ, ಜೀವನಾಂಶ ನೀಡದಿರುವುದಕ್ಕೆ ಸೂಕ್ತ ಕಾರಣ ನೀಡಲು ಅವರು ವಿಫಲವಾಗಿದ್ದಾರೆ. ಈ ಅಂಶ ಹಾಗೂ ಎಲ್ಲ ದಾಖಲೆಗಳನ್ನು ಪರಿಶೀಲಿಸಿದ ಕೌಟುಂಬಿಕ ನ್ಯಾಯಾಲಯ ಬಂಧನ ವಾರಂಟ್ ಹೊರಡಿಸಿದೆ. ಇದನ್ನು ಸಂವಿಧಾನದ ಪರಿಚ್ಚೇದ 21ರ (ಜೀವಿಸುವ ಮತ್ತು ವೈಯಕ್ತಿಕ ಜೀವನದ ಹಕ್ಕು) ಉಲ್ಲಂಘನೆ ಎನ್ನಲಾಗದು ಎಂದು ಪೀಠ ಆದೇಶದಲ್ಲಿ ತಿಳಿಸಿದೆ.

ಪ್ರಕರಣದ ಹಿನ್ನೆಲೆ:

ಮಂಗಳೂರು ಮೂಲದ ಸೈಲೇಶ್‌ ಕುಮಾರ್ ಮತ್ತು ನಿಶಾ ಎಸ್. ಕುಮಾರ್ 1998ರಲ್ಲಿ ವಿವಾಹವಾಗಿದ್ದರು. ದಂಪತಿಗೆ 2000ರಲ್ಲಿ ಗಂಡು ಮಗು ಜನಿಸಿತ್ತು. ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ನಿಶಾ ಅವರು 2014ರಲ್ಲಿ ಮಾಸಿಕ ಐದು ಲಕ್ಷ ರೂ ಮಧ್ಯಂತರ ಜೀವನಾಂಶ ಕೋರಿ ಅರ್ಜಿ ಸಲ್ಲಿಸಿದ್ದರು.

ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಾಲಯ ಮಾಸಿಕ 12,750 ರೂ. ಪಾವತಿಸಲು ಮಧ್ಯಂತರ ಆದೇಶ ನೀಡಿತ್ತು. ನಂತರ ಅರ್ಜಿ ಸಂಬಂಧ ವಿಚಾರಣೆ ನಡೆಸಿದ್ದ ಕೌಟುಂಬಿಕ ನ್ಯಾಯಾಲಯ, ಪತ್ನಿ ಮತ್ತು ಮಗನಿಗೆ ವಿವಿಧ ಅವಧಿಗಳಿಗೆ ಅನ್ವಯವಾಗುವಂತೆ ಮಾಸಿಕ 1.80 ಲಕ್ಷದಿಂದ 2.80 ಲಕ್ಷ ರು.ವರೆಗೆ ಜೀವನಾಂಶ ಪಾವತಿಸಲು ಹಾಗೂ ಬಾಕಿ ಮೊತ್ತಕ್ಕೆ ಶೇ.7.5ರಷ್ಟು ಬಡ್ಡಿಯೊಂದಿಗೆ ಪಾವತಿ ಮಾಡಬೇಕು ಎಂದು ನಿರ್ದೇಶನ ನೀಡಿತ್ತು.

ಈ ಆದೇಶ ಪ್ರಶ್ನಿಸಿ ಸೈಲೇಶ್‌ ಕುಮಾರ್ ಸಲ್ಲಿಸಿರುವ ಪುನ‌ರ್ ಪರಿಶೀಲನಾ ಅರ್ಜಿ ವಿಚಾರಣಾ ಹಂತದಲ್ಲಿದೆ. ಜೊತೆಗೆ, ಪತ್ನಿ ಕೌಟುಂಬಿಕ ನ್ಯಾಯಾಲಯದ ಆದೇಶ ಪಾಲಿಸಲು ಪತಿಗೆ ನಿರ್ದೇಶಿಸಲು ಕೋರಿ ಅರ್ಜಿ ಸಲ್ಲಿಸಿದ್ದರು.

ಅದರ ವಿಚಾರಣೆ ನಡೆಸಿದ ನ್ಯಾಯಾಲಯ ಶೇ.50ರಷ್ಟು ಪರಿಹಾರ ಠೇವಣಿ ಇಡಬೇಕು ಎಂದು ಸೂಚನೆ ನೀಡಿತ್ತು.ಈ ಆದೇಶ ಪಾಲಿಸದ ಹಿನ್ನೆಲೆಯಲ್ಲಿ ಕೌಟುಂಬಿಕ ನ್ಯಾಯಾಲಯವು ಪತಿ ವಿರುದ್ಧ ಹೊರಡಿಸಿದ್ದ ಬಂಧನ ವಾರಂಟ್ ಅನ್ವಯ ಸೈಲೇಶ್ ಅವರನ್ನು ಬಂಧಿಸಿದ್ದ ಪೊಲೀಸರು ಕೌಟುಂಬಿಕ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನಂತರ ಅವರು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು.

ನಂತರ ಹೈಕೋರ್ಟ್ ಮೆಟ್ಟಿಲೇರಿ, ತನ್ನ ಮಾಸಿಕ ಆದಾಯ ಕೇವಲ 42 ಸಾವಿರ ರೂಗಳಾಗಿದೆ.
ಲಕ್ಷಾಂತರ/ ಕೋಟ್ಯಂತರ ರೂ ಜೀವನಾಂಶ ನೀಡಲು ಸಾಧ್ಯವಿಲ್ಲ. ಹೊರಡಿಸಿರುವ ಬಂಧನ ವಾರಂಟ್ ಸಂವಿಧಾನದ 21ನೇ ವಿಧಿಯಡಿ ನೀಡಲಾಗಿರುವ ವೈಯಕ್ತಿಕ ಸ್ವಾತಂತ್ರ್ಯದ ಉಲ್ಲಂಘನೆಯಾಗಿದೆ ಎಂದು ಆಕ್ಷೇಪಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments