ಬೆಂಗಳೂರು:ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿ ಎ 14 ಪ್ರದೋಷ್ ನಗರದ ನ್ಯಾಯಾಲಯಕ್ಕೆ ಸಲ್ಲಿಸಿರುವ 11 ಪುಟಗಳ ಕ್ಷಮಾದಾನ ಅರ್ಜಿ (ಮಾಫಿ ಸಾಕ್ಷಿ) ಪ್ರಕರಣಕ್ಕೆ ದೊಡ್ಡ ತಿರುವು ನೀಡಿದೆ.
ಪ್ರಕರಣದಲ್ಲಿ ತಾನು ಮಾಡಿದ ತಪ್ಪಿಗೆ ಪಶ್ಚಾತ್ತಾಪ ವ್ಯಕ್ತಪಡಿಸಿರುವ ಪ್ರದೋಷ್, ಜಯನಗರದ ಮೈದಾನದಲ್ಲಿ ದರ್ಶನ್ ಪರಿಚಯವಾದ ದಿನದಿಂದ ಹಿಡಿದು ಜೈಲು ಪಾಲಾಗುವವರೆಗಿನ ಘಟನಾವಳಿಯನ್ನು ಎಳೆಎಳೆಯಾಗಿ ಸಿಸಿಎಚ್-59 ನ್ಯಾಯಾಧೀಶರ ಮುಂದೆ ಬಿಚ್ಚಿಟ್ಟಿದ್ದಾನೆ.
ನಟ ದರ್ಶನ್ ಹಾಗೂ ಇತರರು ರೇಣುಕಸ್ವಾಮಿ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದ್ದಾರೆ. ಪವಿತ್ರಾ ಗೌಡಗೆ ಕಳುಹಿಸಲಾಗಿದೆ ಎನ್ನಲಾದ ವಾಟ್ಸಾಪ್ ಸಂದೇಶಗಳ ವಿಚಾರವಾಗಿ ರೇಣುಕಸ್ವಾಮಿಯನ್ನು ನಿಂದಿಸಿದ ದರ್ಶನ್, ಮೊದಲು ಹಲ್ಲೆ ನಡೆಸಿದ್ದಾರೆ.
ಈ ವೇಳೆ ರೇಣುಕಸ್ವಾಮಿ ತಲೆಯಿಂದ ರಕ್ತಸುರಿದಿದೆ. ಪವಿತ್ರಾ ಗೌಡ ಕೂಡ ತಮ ಚಪ್ಪಲಿಯಿಂದ ಹೊಡೆದಿದ್ದಾರೆ ಎಂದು ಆರೋಪಿಸಲಾಗಿದೆ. ಬಳಿಕ ರೇಣುಕಸ್ವಾಮಿಯನ್ನು ಒಳಉಡುಪಿನವರೆಗೆ ವಿವಸ್ತ್ರಗೊಳಿಸಲಾಗಿದ್ದು, ನಂದೀಶ್, ಪವನ್ ಮತ್ತು ನಾಗರಾಜ್ ಮರದ ಕೋಲು ಹಾಗೂ ನೈಲಾನ್ ಹಗ್ಗದಿಂದ ಹಲ್ಲೆ ನಡೆಸಿದ್ದಾರೆ.
ದರ್ಶನ್ ಕ್ರೌರ್ಯ:
ನೈಲಾನ್ ಹಗ್ಗದಿಂದ ರೇಣುಕಸ್ವಾಮಿಯ ಕೈ ಹಾಗೂ ಬೆನ್ನಿಗೆ ದರ್ಶನ್ ಹಲವು ಬಾರಿ ಹೊಡೆದಿದ್ದಾರೆ. ಅಲ್ಲದೆ ಖಾಸಗಿ ಅಂಗಗಳಿಗೆ ಪದೇ ಪದೇ ಒದ್ದಿದ್ದಾರೆ. ಆಹಾರ ಮತ್ತು ನೀರು ನೀಡಿದ ಬಳಿಕವೂ ಕುತ್ತಿಗೆ ಹಾಗೂ ಎದೆಗೆ ಒದ್ದಿದ್ದರಿಂದ ರೇಣುಕಸ್ವಾಮಿ ಕುಸಿದು ಬಿದ್ದಿದ್ದಾರೆ. ದರ್ಶನ್ ತಮ ಎರಡೂ ಕಾಲುಗಳನ್ನು ರೇಣುಕಸ್ವಾಮಿ ಎದೆಯ ಮೇಲೆ ಇಟ್ಟು ಒತ್ತಿದ್ದಾರೆ ಎಂದು ಪ್ರದೋಷ್ ಆರೋಪಿಸಿದ್ದಾರೆ. ಹಲ್ಲೆ ಮಾರಕವಾಗಬಹುದು ಎಂದು ತಾನು ಹಲವು ಬಾರಿ ತಡೆದಿದ್ದಾಗಿಯೂ ಅವರು ತಿಳಿಸಿದ್ದಾರೆ.
ಕೃತ್ಯ ಮುಚ್ಚಿಹಾಕಲು ಸಂಚು :
ಪರಿಸ್ಥಿತಿ ಕೈಮೀರಿದ ಬಳಿಕ, ತಕ್ಕ ಪರಿಣಾಮಗಳನ್ನು ಎದುರಿಸಲು ಸಹಾಯ ಮಾಡದಿದ್ದರೆ ತಾನು ಬಂದೂಕಿನಿಂದ ಆತಹತ್ಯೆ ಮಾಡಿಕೊಳ್ಳುವುದಾಗಿ ದರ್ಶನ್ ಬೆದರಿಕೆ ಹಾಕಿದ್ದರು ಎಂದು ಪ್ರದೋಷ್ ಅರ್ಜಿಯಲ್ಲಿ ತಿಳಿಸಿದ್ದಾರೆ.
ತನಿಖೆಯನ್ನು ದಾರಿ ತಪ್ಪಿಸಲು, ಹಣಕಾಸಿನ ವಿವಾದದ ಹಿನ್ನೆಲೆಯಲ್ಲಿ ಚಿತ್ರದುರ್ಗದಿಂದ ಕರೆತರಲಾದ ರೇಣುಕಸ್ವಾಮಿಯನ್ನು ಜಗಳದ ಸಮಯದಲ್ಲಿ ಕೊಲೆ ಮಾಡಲಾಗಿದೆ.ಎಂದು ಬಿಂಬಿಸಲು ಪರ್ಯಾಯ ಕಥೆಯನ್ನು ಸೃಷ್ಟಿಸಲು ಗುಂಪು ಚರ್ಚಿಸಿದೆ.ರಾಘವೇಂದ್ರ, ಕಪ್ಪೆ ಅಲಿಯಾಸ್ ಕಾರ್ತಿಕ್ ಮತ್ತು ನಿಖಿಲ್ ಶರಣಾಗಲು ಒಪ್ಪಿಕೊಂಡಿದ್ದು, ದರ್ಶನ್ ನಗದು ಚೀಲದಿಂದ ನಾಗರಾಜ್‌ಗೆ 5 ಲಕ್ಷ ರೂ. ಮತ್ತು ವಿನಯ್ ಗೆ 10 ಲಕ್ಷ ರೂ.ಗಳನ್ನು ನೀಡಿದ್ದಾರೆ.
ಸುಮನಹಳ್ಳಿ ಬಳಿಯ ಚರಂಡಿಯಲ್ಲಿ ಶವವನ್ನು ಎಸೆಯಲು ಬಿಳಿ ಸ್ಕಾರ್ಪಿಯೋ ವಾಹನ ಬಳಸಲಾಗಿದ್ದು, ಪೊಲೀಸರ ಕಣ್ಣು ತಪ್ಪಿಸಲು ವಾಹನದ ನಂಬರ್ ಪ್ಲೇಟ್‌ಗಳನ್ನು ತೆಗೆದುಹಾಕಲಾಗಿತ್ತು.
ರಕ್ಷಣೆಗಾಗಿ ಮನವಿ :
ಕೊಲೆ ಮತ್ತು ಇತರ ಆರೋಪಿಗಳ ಪಾತ್ರದ ಬಗ್ಗೆ ತನಗೆ ತಿಳಿದಿರುವ ಎಲ್ಲಾ ಸತ್ಯಗಳನ್ನು ಬಹಿರಂಗಪಡಿಸುವುದಾಗಿ ತಿಳಿಸಿರುವ ಪ್ರದೋಷ್, ಕಾನೂನುಬದ್ದ ಕ್ಷಮಾದಾನ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಈ ಮೂಲಕ ಈ ಪ್ರಕರಣದಲ್ಲಿ ಕ್ಷಮಾದಾನ ಕೋರಿ ಅರ್ಜಿ ಸಲ್ಲಿಸಿದ ಮೊದಲ ಆರೋಪಿ ಇವರಾಗಿದ್ದಾರೆ. ಇವರ ಜತೆಗೆ ಆರೋಪಿಗಳಾದ ರವಿಶಂಕರ್ ಮತ್ತು ವಿನಯ್ ಕೂಡ ಅನುಮೋದಕ ಸ್ಥಾನಮಾನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ.
ಜೈಲಿನಲ್ಲಿ ಸಹ-ಆರೋಪಿಗಳಿಂದ ಜೀವ ಬೆದರಿಕೆ ಅಥವಾ ಒತ್ತಡ ಎದುರಾಗಬಹುದು ಎಂಬ ಕಾರಣಕ್ಕೆ, ತನ್ನನ್ನು ಪ್ರತ್ಯೇಕ ಸೆಲ್‌ನಲ್ಲಿಡಬೇಕು ಮತ್ತು ವಿಚಾರಣೆ ವೇಳೆ ಪ್ರತ್ಯೇಕವಾಗಿ ಹಾಜರುಪಡಿಸಬೇಕು ಎಂದು ಕೋರಿ ಪ್ರದೋಷ್ ಪ್ರತ್ಯೇಕ ರಕ್ಷಣಾ ಅರ್ಜಿಯನ್ನೂ ಸಲ್ಲಿಸಿದ್ದಾರೆ.ಪ್ರಾಸಿಕ್ಯೂಷನ್ ಪರ ವಕೀಲರು ಪ್ರದೋಷ್ ಅವರ ಅನುಮೋದಕ ಸ್ಥಾನಮಾನದ ಅರ್ಜಿಯನ್ನು ಬೆಂಬಲಿಸಿದ್ದು, ಎಲ್ಲಾ ಕಡೆಯ ವಾದಗಳನ್ನು ಆಲಿಸಿರುವ 59ನೇ ಸೆಷನ್ಸ್ ನ್ಯಾಯಾಲಯವು ತನ್ನ ಆದೇಶವನ್ನು ಕಾಯ್ದಿರಿಸಿದೆ.
ಇಡೀ ಕೃತ್ಯದಲ್ಲಿ ಭಾಗಿಯಾಗಿದ್ದಕ್ಕೆ ನನಗೆ ಈಗ ತೀವ್ರ ಪಶ್ಚಾತ್ತಾಪವಾಗುತ್ತಿದ್ದು, ನ್ಯಾಯಾಲಯದ ಮುಂದೆ ಸತ್ಯ ಹೇಳಲು ಮಾಫಿ ಸಾಕ್ಷಿಯಾಗುತ್ತಿದ್ದೇನೆ ಎಂದು ಪ್ರದೋಷ್ ತಮ್ಮ 11 ಪುಟಗಳ ಸುದೀರ್ಘ ಅರ್ಜಿಯಲ್ಲಿ ಉಲ್ಲೇಖಿಸಿದ್ದಾನೆ.



