ಬೆಂಗಳೂರು: ಹೊರಟ್ಟಿ ರಾಜೀನಾಮೆಯಿಂದ ತೆರವಾಗಿರುವ ಪರಿಷತ್ ಸಭಾಪತಿ ಸ್ಥಾನಕ್ಕೆ ಹಂಗಾಮಿ ಸಭಾಪತಿಯಾಗಿ ಪುಟ್ಟಣ್ಣರನ್ನು ಸರ್ಕಾರ ನೇಮಕ ಮಾಡಿದೆ.
ಇದೇ ಆ. 13ರಿಂದ ಮಳೆಗಾಲದ ಅಧಿವೇಶನ ಹಿನ್ನೆಲೆ ಹಂಗಾಮಿ ಸಭಾಪತಿ ನೇಮಕ ಮಾಡಿ ರಾಜ್ಯಪಾಲರು ಆದೇಶ ಹೊರಡಿಸಿದ್ದಾರೆ.
ಬಸವರಾಜ್ ಹೊರಟ್ಟಿ ಸಭಾಪತಿ ಸ್ಥಾನಕ್ಕೆ ಆ.7ರಂದು ರಾಜೀನಾಮೆ ನೀಡಿದ್ದು, ಆಗಸ್ಟ್ 14 ರಂದು ಸಭಾಪತಿ ಆಯ್ಕೆ ಆಗಲಿದೆ. ಕಾಂಗ್ರೆಸ್ ಸಲೀಂ ಅಹಮದ್ ಸಭಾಪತಿ ಅಭ್ಯರ್ಥಿಯಾಗಿದ್ದು, ಉಮಾಶ್ರೀ ಉಪಸಭಾಪತಿ ಸ್ಥಾನದ ಅಭ್ಯರ್ಥಿಯಾಗಿದ್ದಾರೆ.
ಈ ಮುಂಚೆ ಸಿಎಂ ಡಿ.ಕೆ.ಶಿವಕುಮಾರ್ ಬಸವರಾಜ ಹೊರಟ್ಟಿಯವರನ್ನೇ ಹಂಗಾಮಿ ಸಭಾಪತಿಯಾಗಿ ಮುಂದುವರಿಸುವುದಾಗಿ ತಿಳಿಸಿದ್ದರು. ಆದರೆ, ಬಸವರಾಜ್ ಹೊರಟ್ಟಿ ಹಂಗಾಮಿ ಸಭಾಪತಿಯಾಗುವುದಕ್ಕೆ ನಿರಾಕರಿಸಿದ್ದರು. ಈ ಹಿನ್ನೆಲೆ ಇದೀಗ ಸರ್ಕಾರ ಪರಿಷತ್ ಸದಸ್ಯ ಪುಟ್ಟಣ್ಣರನ್ನು ಹಂಗಾಮಿ ಸಭಾಪತಿಯಾಗಿ ನಿಯೋಜನೆ ಮಾಡಿದೆ.
ಬಸವರಾಜ ಹೊರಟ್ಟಿ ಆ.14ರಂದು ರಾಜೀನಾಮೆ ಕೊಡಲು ತೀರ್ಮಾನಿಸಿದ್ದರು. ಆದರೆ ಸಿಎಂ ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಸೇರಿ ಕಾಂಗ್ರೆಸ್ ಮುಖಂಡರು ಒತ್ತಡ ಹಾಕಿದ್ದರಿಂದ ಆ.7ರಂದು ಬಸವರಾಜ ಹೊರಟ್ಟಿ ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ರಾಜೀನಾಮೆ ಪತ್ರ ಸಲ್ಲಿಸಿದ ಕೆಲವೇ ಕ್ಷಣದಲ್ಲಿ ಸಭಾಪತಿ ಸ್ಥಾನ ತೆರವಾಗಿರುವ ಅಧಿಸೂಚನೆ ಹೊರಬಿದ್ದಿತ್ತು.
ರಾಜೀನಾಮೆ ಬಳಿಕ ಮಾತನಾಡಿದ ಬಸವರಾಜ ಹೊರಟ್ಟಿ, ಕೂಡಲೇ ರಾಜೀನಾಮೆ ಕೊಡಿ ಅಂದರು. ಅದಕ್ಕಾಗಿ ರಾಜೀನಾಮೆ ಕೊಟ್ಟೆ. ಆ.14ರಂದು ರಾಜೀನಾಮೆ ಕೊಡಬೇಕಿತ್ತು. ಅವಧಿ ಮುಗಿಯುವ ಮುನ್ನವೇ ರಾಜೀನಾಮೆ ಪಡೆದಿರುವುದು ಸ್ವಲ್ಪ ಬೇಸರ ಆಗಿದೆ ಎಂದು ಅಸಮಾಧಾನ ಹೊರಹಾಕಿದ್ದರು.



